ಮನೆ ಕಾನೂನು ನಕಲಿ ಜಾತಿ ಪತ್ರ: ಡಿಸಿವಿಸಿ ಶಿಫಾರಸ್ಸು ಮಾಡದೆ ನಾಗರಿಕ ಹಕ್ಕು ನಿರ್ದೇಶನಾಲಯ ಪ್ರಕರಣ ದಾಖಲಿಸಲಾಗದು- ಹೈಕೋರ್ಟ್‌

ನಕಲಿ ಜಾತಿ ಪತ್ರ: ಡಿಸಿವಿಸಿ ಶಿಫಾರಸ್ಸು ಮಾಡದೆ ನಾಗರಿಕ ಹಕ್ಕು ನಿರ್ದೇಶನಾಲಯ ಪ್ರಕರಣ ದಾಖಲಿಸಲಾಗದು- ಹೈಕೋರ್ಟ್‌

0

ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪಿಗಳ ವಿರುದ್ಧ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ (ಡಿಸಿವಿಸಿ) ಶಿಫಾರಸ್ಸು ಮಾಡದ ಹೊರತು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಲು ಆಗದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಸ್ಪಷ್ಟಪಡಿಸಿದೆ.

Join Our Whatsapp Group

ಎನ್‌ಜಿಇಎಫ್‌ ಲೇಔಟ್‌ನ ಸದಾನಂದ ನಗರ ನಿವಾಸಿ ಎ ಎಸ್ ಪಳನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದ್ದು, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣ, ಮತ್ತು ಇದಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯನ್ನು ರದ್ದುಪಡಿಸಿದೆ.

“ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ಮೀಸಲಾತಿ ಮತ್ತು ನೇಮಕಾತಿ ಇತರೆ) ಕಾಯಿದೆ–1990ರ ಸೆಕ್ಷನ್‌ 5ಎ ಅನುಸಾರ ಸೆಕ್ಷನ್‌ 6ರಲ್ಲಿ ತಿಳಿಸಿರುವಂತೆ ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಾದರೆ ರಾಜ್ಯ ಸರ್ಕಾರದಿಂದ ಪೂರ್ವನುಮತಿ ಪಡೆಯಬೇಕು. ಆದರೆ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಪೂರ್ವಾನುಮತಿ ಪಡೆದಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಜಾತಿ ಪ್ರಮಾಣ ಪತ್ರ ರದ್ದುಪಡಿಸಿರುವ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದ್ದಾರೆ. ಈ ಅರ್ಜಿ ವಿಚಾರಣಾ ಹಂತದಲ್ಲಿರುವಾಗ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ತನ್ನ ಅಧಿಕಾರ ಮೀರಿ ಎಫ್‌ಐಆರ್ ದಾಖಲಿಸಿದೆ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಯಾವುದೇ ಶಿಫಾರಸ್ಸು ಮಾಡಿಲ್ಲದಿರುವುದು ಗಮನಾರ್ಹ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಪಳನಿ ಬಂದರು ಮತ್ತು ಹಡಗುಗಳು ಹಾಗೂ ಸಾರಿಗೆ ಸಚಿವಾಲಯದಲ್ಲಿ ಲೈಟ್ ಕೀಪರ್ ಆಗಿ ಸೇವೆಗೆ ಸೇರಿಕೊಂಡಿದ್ದರು. ಇವರು ಮೊದಲಿಯಾರ್ ಸಮುದಾಯಕ್ಕೆ ಸೇರಿದ್ದು, ಸರ್ಕಾರದ ಪ್ರಾಧಿಕಾರಗಳಿಗೆ ತಪ್ಪು ಮಾಹಿತಿ ನೀಡಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಸಮುದಾಯಕ್ಕೆ (ಎಸ್‌ಟಿ) ಸೇರಿದವರು ಎಂಬ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಇವರ ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್ ರದ್ದುಪಡಿಸಿದ್ದರು.

ಇದನ್ನು ಪ್ರಶ್ನಿಸಿ ಪಳನಿ ಮೇಲ್ಮವಿ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಇವರ ವಿರುದ್ಧ ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿತ್ತು. ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಪಳನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಮತ್ತು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪರ ವಕೀಲ ಸಿ ಜಗದೀಶ್‌ ವಾದಿಸಿದ್ದರು.