ಬೆಂಗಳೂರು: ನಗರದಲ್ಲಿ ವಿಚಿತ್ರ ಮತ್ತು ಆತಂಕಕಾರಿ ಘಟನೆ ನಡೆದಿದೆ. ನಕಲಿ ನಾಗಸಾಧುವೊಬ್ಬ ವ್ಯಕ್ತಿ ತನ್ನ ಜಾದೂಮಯ ಮಾತುಗಳಿಂದ ಕಾರು ಚಾಲಕನನ್ನು ಮೋಸಗೊಳಿಸಿ, ಮಂಕುಬೂದಿ ಎರಚಿ ಚಾಲಕನಿಗೆ ರುದ್ರಾಕ್ಷಿ ಕೊಟ್ಟು ಕೈಯಲ್ಲಿದ್ದ 10 ಗ್ರಾಂ ಚಿನ್ನದ ಉಂಗುರ ಕಸಿದು ಪರಾರಿಯಾಗಿರುವ ಘಟನೆ ಪತ್ತೆಯಾಗಿದೆ.
ಈ ಘಟನೆ ಏಪ್ರಿಲ್ 19ರಂದು ನಡೆದಿದೆ. ವೈಯಾಲಿಕಾವಲ್ ನಿವಾಸಿ ವೆಂಕಟಕೃಷ್ಣಯ್ಯ ಎಂಬವರು ಖಾಸಗಿ ಹೋಟೆಲ್ ಬಳಿ ತನ್ನ ಕಾರಿನಲ್ಲಿದ್ದ ಮಾಲೀಕರನ್ನು ಡ್ರಾಪ್ ಮಾಡಿದ್ದ ನಂತರ ರಸ್ತೆಯ ಪಕ್ಕದಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಇದೇ ವೇಳೆ ಕಾಣಿಸಿಕೊಂಡ ನಕಲಿ ನಾಗಸಾಧು ಅವರ ಬಳಿಗೆ ಬಂದು, ಚಾಲಕನನ್ನು ಕಂಡು 5 ನಿಮಿಷ ವಿಶ್ರಾಂತಿ ಪಡೆದುಕೊಳ್ಳಬೇಕು ಅಂತ ಹೇಳಿದ್ದಾನೆ. ನಂತ್ರ ತನ್ನ ಅಸಲಿ ವರಸೆ ತೆಗೆದಿದ್ದಾನೆ.
ಆ ನಂತರ ಸಾದು ತನ್ನ ಮಾತುಗಳ ಮಾಂತ್ರಿಕ ಶೈಲಿಯಲ್ಲಿ ವೆಂಕಟಕೃಷ್ಣಯ್ಯನಿಗೆ “ನಿನ್ನ ಕೈಯಲ್ಲಿರುವ ಚಿನ್ನದ ಉಂಗುರ ಕೊಡು” ಎಂದು ಕೇಳುತ್ತಾನೆ. ಆತ ಉಂಗುರ ತೆಗೆದು ಕೊಡುತ್ತಿದ್ದಂತೆ ಆ ವ್ಯಕ್ತಿ ಬೆರಳಿಗೆ ಬೂದಿ ರೀತಿಯ ವಸ್ತುವನ್ನು ಹಾಕಿ, “ಹಿಂದೆ ನೋಡಿ ಹೋಗಬೇಡ, ಇಲ್ಲದಿದ್ರೆ ನಿನ್ನ ಜೀವನದಲ್ಲಿ ಕೆಡುಕಾಗುತ್ತದೆ” ಎಂದು ಹೆದರಿಸುತ್ತಾನೆ.
ಅವನ ಮಾತು ಕೇಳಿದ ಚಾಲಕ ಚಿಂತಾಗೊಂಡು ಮುಂದೆ ನಡೆಯುತ್ತಾನೆ. ಕೆಲ ಕ್ಷಣಗಳಲ್ಲಿ ತಾನೊಂದು ಮೋಸಕ್ಕೆ ಬಲಿಯಾಗಿದ್ದೇನೆ ಎಂಬ ಅರಿವು ಬರುತ್ತದೆ. ಆದರೆ ಈ ಹೊತ್ತಿಗೆ ನಕಲಿ ನಾಗಸಾಧು ಅಲ್ಲಿಂದ ನಾಪತ್ತೆಯಾಗಿದ್ದಾನೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.














