ದೆಹಲಿ: ಪ್ರತಿಪಕ್ಷಗಳು ಒಟ್ಟಾಗಿ ಸಭೆ ನಡೆಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ಮೇಲೆ ಕಟುವಾದ ಟೀಕೆ ಮಾಡಿದ್ದಾರೆ. ” ಕುಟುಂಬ ಮೊದಲು ಮತ್ತು ರಾಷ್ಟ್ರಕ್ಕೆ ಏನಿಲ್ಲ” ಎನ್ನುವುದು ಪ್ರತಿಪಕ್ಷಗಳ ಧ್ಯೇಯವಾಕ್ಯ ಎಂದು ಪ್ರಧಾನಿ ಮೋದಿ ಹೇಳಿದರು.
ಅಂಡಮಾನ್ ಮತ್ತು ನಿಕೋಬಾರ್ ನ ಪೋರ್ಟ್ ಬ್ಲೇರ್ ನಲ್ಲಿ ವೀರ್ ಸಾವರ್ಕರ್ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪ್ರಜಾಪ್ರಭುತ್ವ ಎಂದರೆ ‘ಜನರದ್ದು, ಜನರಿಂದ, ಜನರಿಗಾಗಿ’. ಆದರೆ ಕುಟುಂಬದ್ದು, ಕುಟುಂಬದವರಿಂದ , ಕುಟುಂಬಕ್ಕಾಗಿ ಎಂಬುದೇ ಪ್ರತಿಪಕ್ಷಗಳ ಮಂತ್ರ ಎಂದು ಪ್ರಧಾನಿ ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ರಣತಂತ್ರ ರೂಪಿಸಲು ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳು ಜಮಾಯಿಸಿರುವ ಕುರಿತು ಕಿಡಿಕಾರಿರುವ ಪ್ರಧಾನಿ ಮೋದಿ ಅವರು, ತಿಪಕ್ಷಗಳ ಸಮಾವೇಶವನ್ನು “ಮಹಾ ಭ್ರಷ್ಟರ” ಸಭೆ ಎಂದಿದ್ದಾರೆ.
“ಈ ಸಭೆ ಭ್ರಷ್ಟಾಚಾರವನ್ನು ಉತ್ತೇಜಿಸಲು ಎಂದು ಜನರು ಹೇಳುತ್ತಿದ್ದಾರೆ. ತಮಿಳುನಾಡಿನಲ್ಲಿ ಭ್ರಷ್ಟಾಚಾರ ಪ್ರಕರಣಗಳ ಹೊರತಾಗಿಯೂ ವಿರೋಧ ಪಕ್ಷಗಳು ಡಿಎಂಕೆಗೆ ಕ್ಲೀನ್ ಚಿಟ್ ನೀಡಿವೆ. ಎಡಪಕ್ಷಗಳು ಮತ್ತು ಕಾಂಗ್ರೆಸ್ ತಮ್ಮ ಕಾರ್ಯಕರ್ತರ ಮೇಲೆ ದಾಳಿಯ ಹೊರತಾಗಿಯೂ ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ಹಿಂಸಾಚಾರದ ಬಗ್ಗೆ ಮೌನವಾಗಿವೆ.
“ಅವರಿಗೆ (ವಿರೋಧ ಪಕ್ಷಗಳು) ದೇಶದ ಬಡವರ ಮಕ್ಕಳ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲ. ಅವರ ಸಾಮಾನ್ಯ ಕಾರ್ಯಕ್ರಮವೆಂದರೆ ಅವರ ಕುಟುಂಬಕ್ಕಾಗಿ ಭ್ರಷ್ಟಾಚಾರವನ್ನು ಹೆಚ್ಚಿಸುವುದು. ಪ್ರಜಾಪ್ರಭುತ್ವ ಎಂದರೆ ‘ಜನರದ್ದು, ಜನರಿಂದ, ಜನರಿಗಾಗಿ’. ಆದರೆ ಇವು ಕುಟುಂಬ ರಾಜಕಾರಣದ ಪಕ್ಷಗಳು ‘ಕುಟುಂಬದ್ದು, ಕುಟುಂಬದಿಂದ, ಕುಟುಂಬಕ್ಕಾಗಿ’ ಎಂಬ ಮಂತ್ರವನ್ನು ಹೊಂದಿವೆ. ಅವರಿಗೆ ಅವರ ಕುಟುಂಬವೇ ಮೊದಲನೆಯದು ದೇಶ ಏನೂ ಅಲ್ಲ ಎಂದು ಪ್ರಧಾನಿ ಹೇಳಿದ್ದಾರೆ.