ಮನೆ ಅಪರಾಧ ಮಕ್ಕಳು, ಪತ್ನಿಯನ್ನು ಬಾವಿಗೆ ತಳ್ಳಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: ಮೂವರು ಮಕ್ಕಳ ಸಾವು

ಮಕ್ಕಳು, ಪತ್ನಿಯನ್ನು ಬಾವಿಗೆ ತಳ್ಳಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: ಮೂವರು ಮಕ್ಕಳ ಸಾವು

0

ಕಿನ್ನಿಗೋಳಿ (Kinnigoli): ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳನ್ನು ಹಾಗೂ ಪತ್ನಿಯನ್ನು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿದ್ದಾನೆ.

ಕಿನ್ನಿಗೋಳಿ ಸಮೀಪದ ಹೊಸಕಾವೇರಿ ಎಂಬಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಮಕ್ಕಳು ಮೃತಪಟ್ಟಿದ್ದು, ಪತಿ, ಪತ್ನಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ರಶ್ಮಿತಾ (8ನೇ ತರಗತಿ), ಉದಯ (6ನೇ ತರಗತಿ ) ಹಾಗೂ ದಕ್ಷಿತ್‌ (ಅಂಗನವಾಡಿ) ಮೃತಪಟ್ಟ ಮಕ್ಕಳು. ಹಿತೇಶ್‌ ಶೆಟ್ಟಿಗಾರ್‌ (46) ಮೂವರು ಮಕ್ಕಳು ಹಾಗೂ ಪತ್ನಿಯನ್ನು ಬಾವಿಗೆ ತಳ್ಳಿದ ಆರೋಪಿ.

ಘಟನೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ. ಪತಿ ಕೆಲಸಕ್ಕೆ ಹೋಗದೆ ಇರುವುದರ ಬಗ್ಗೆ ಪತಿ-ಪತ್ನಿ ಮಧ್ಯೆ ಆಗಾಗ ವಾಗ್ವಾದವಾಗುತ್ತಿತ್ತು. ಇದರ ಪರಿಣಾಮವಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಗುರುವಾರ ಸಂಜೆ ಶಾಲೆಯಿಂದ ಬಂದ ಮಕ್ಕಳನ್ನು ಯಾರೂ ಇಲ್ಲದ ವೇಳೆ ಹಿತೇಶ್‌ ಶೆಟ್ಟಿಗಾರ್‌ ಹತ್ತಿರದಲ್ಲೇ ಇದ್ದ ಬಾವಿಯ ಹತ್ತಿರ ಕರೆದೊಯ್ದು ಅಲ್ಲಿಂದ ಬಾವಿಗೆ ದೂಡಿದ್ದಾನೆ. ಕೆಲಸದಿಂದ ಬಂದ ಪತ್ನಿ ಲಕ್ಷ್ಮಿ ಮಕ್ಕಳು ಇಲ್ಲದಿರುವುದನ್ನು ಕಂಡು ಪತಿಯೊಂದಿಗೆ ಹುಡುಕುತ್ತಾ ಬಾವಿಯ ಹತ್ತಿರ ಬಂದಾಗ ಆತ ಆಕೆಯನ್ನು ಬಾವಿಗೆ ದೂಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ್ದಾನೆ.

ಇದನ್ನು ಕಂಡ ಸ್ಥಳೀಯರು ಇವರಿಬ್ಬರನ್ನು ಹಗ್ಗದ ಸಹಾಯದಿಂದ ಮೇಲೆ ಎಳೆದು ರಕ್ಷಿಸಿದ್ದಾರೆ. ನಂತರ ಮಕ್ಕಳನ್ನು ಮೇಲಕ್ಕೆತ್ತಿ ಆಂಬ್ಯುಲೆನ್ಸ್‌ ಮೂಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಮೂವರು ಮಕ್ಕಳು ಅಸು ನೀಗಿದ್ದಾರೆ. ಈ ಸಂಬಂಧ ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.