ಮಲಯಾಳಂನಲ್ಲಿ ಹಾಸ್ಯ ಪಾತ್ರಗಳ ಮೂಲಕ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಜನರ ಮನಗೆದ್ದಿದ್ದ ಕೊಲ್ಲಂ ಸುಧಿ (Kollam Sudhi) ಅವರು ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ.
ಅವರಿಗೆ 39 ವರ್ಷ ವಯಸ್ಸಾಗಿತ್ತು.
ಇಂದು (ಜೂನ್ 5) ಮುಂಜಾನೆ ಈ ಅಪಘಾತ ನಡೆದಿದೆ. ಅವರ ಸಾವಿಗೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಅವರ ಅಕಾಲಿಕ ಮರಣವು ಕುಟುಂಬದವರಿಗೆ ಹಾಗೂ ಫ್ಯಾನ್ಸ್ ಗೆ ಅತೀವ ದುಃಖ ತಂದಿದೆ. ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಲಾಗುತ್ತಿದೆ.
ತ್ರಿಶೂರ್ ಸಮೀಪ ಮುಂಜಾನೆ 4.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅವರು ವಡಕರಾದಲ್ಲಿ ಕಾರ್ಯಕ್ರಮ ಒಂದನ್ನು ಮುಗಿಸಿ ಮರಳುತ್ತಿದ್ದರು. ಆಗ ಇವರ ಕಾರು ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ತೀವ್ರವಾಗಿ ಗಾಯಗೊಂಡ ಕೊಲ್ಲಂ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
2015ರಲ್ಲಿ ಸುಧಿ ಚಿತ್ರರಂಗಕ್ಕೆ ಬಂದರು. ಸುಧಿ ಅವರು ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಹಾಸ್ಯ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದರು. ಸುಧಿ ಅವರು ಸಿನಿಮಾದಲ್ಲೂ ನಟಿಸಿದ್ದಾರೆ. ‘ಕಟ್ಟಪ್ಪಣ್ಣ’, ‘ಆ್ಯನ್ ಇಂಟರ್ನ್ಯಾಷನಲ್ ಲೋಕಲ್ ಸ್ಟೋರಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸುಧಿ ಸಾವಿಗೆ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ. ಅವರನ್ನು ಕಳೆದುಕೊಂಡಿದ್ದು ಫ್ಯಾನ್ಸ್ಗೆ ದುಃಖ ತಂದಿದೆ.














