ಮನೆ ಅಪರಾಧ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಕರ್ನಾಟಕದ ಇಬ್ಬರು ಸೇರಿ ನಾಲ್ವರು ಸಾವು

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಕರ್ನಾಟಕದ ಇಬ್ಬರು ಸೇರಿ ನಾಲ್ವರು ಸಾವು

0

ಮಹೌ (ಮಧ್ಯಪ್ರದೇಶ): ಇಲ್ಲಿನ ಮಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದಾರೆ.

Join Our Whatsapp Group

ಮೃತರಲ್ಲಿ ಇಬ್ಬರು ಕರ್ನಾಟಕ ಮೂಲದವರು ಎಂದು ವರದಿಯಾಗಿದೆ. ತಡರಾತ್ರಿ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಮಾನ್ಪುರದ ಭೈರವ ಘಾಟ್​​ನಲ್ಲಿ ಟೆಂಪೋ ಟ್ರಾವೆಲರ್​ ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಟೆಂಪೋ ಟ್ರಾವೆಲರ್‌ನಲ್ಲಿದ್ದ ಪ್ರಯಾಣಿಕರು ಕರ್ನಾಟಕದ ನಿವಾಸಿಗಳು ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ಘಟನೆಯಲ್ಲಿ ಟ್ರಾವೆಲರ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ಸಂದರ್ಭದಲ್ಲಿ, ಆ ಮಾರ್ಗವಾಗಿ ಹೋಗುತ್ತಿದ್ದ ಬೈಕ್​ಗೂ ಕೂಡ ಡಿಕ್ಕಿಯಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸವಾರರು ಸಹ ಮೃತರಾಗಿದ್ದಾರೆ. ಅಲ್ಲದೇ, ಟೆಂಪೋ ಟ್ರಾವೆಲರ್‌ ನಲ್ಲಿದ್ದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟ ನಾಲ್ವರ ಗುರುತು ಇನ್ನೂ ಪತ್ತೆಯಾಗಿಲ್ಲ.

ಘಟನೆ ಮಾಹಿತಿ ತಿಳಿದು ಮಾನ್ಪುರ ಠಾಣೆ ಪೊಲೀಸರು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತದ ರಭಸಕ್ಕೆ ವಾಹನಗಳು ನಜ್ಜುಗುಜ್ಜಾಗಿದ್ದು, ಕೆಲ ಮೃತದೇಹಗಳೂ ಕೂಡ ಛಿದ್ರಗೊಂಡಿದ್ದವು. ವಾಹನದಲ್ಲಿದ್ದ ವಸ್ತುಗಳೆಲ್ಲ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗಾಯಾಳುಗಳು ಇಂದೋರ್‌ನ ಎಂವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾನ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.