ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಜಾಲವನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಭೇದಿಸಿದ್ದಾರೆ. ಅಕ್ಟೋಬರ್ 15ರಂದು ಅನುಮಾನದ ಮೇಲೆ ಪೊಲೀಸರು ವಾಹನ ತಪಾಸಣೆ ಮಾಡಿದ್ದರು. ಬಳಿಕ ವಾಹನ ಚೇಸ್ ಮಾಡಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೆಣ್ಣು ಮಗು ಎಂದು ಆರೋಪಿಗಳು ಭ್ರೂಣ ಹತ್ಯೆ ಮಾಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ವೈದ್ಯರು, ಮೂವರು ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳ ಅವಧಿಯಲ್ಲಿ ಆರೋಪಿಗಳು 342 ಭ್ರೂಣ ಹತ್ಯೆ ಮಾಡಿದ್ದಾರೆ. ಒಂದು ಕೃತ್ಯವೆಸಗಲು 20 ಸಾವಿರದಿಂದ 25 ಸಾವಿರ ಪಡೆಯುತ್ತಿದ್ದರು. ಬಂಧಿತ ವೀರೇಶ್, ಸಿದ್ದೇಶ್ ಈ ಹಿಂದೆ ಕಿಡ್ನ್ಯಾಪ್ ಕೇಸ್ ನಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದರು.
ಆರ್.ಆರ್.ನಗರದಲ್ಲಿನ ಹಸುಗೂಸು ಮಾರಾಟ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಮಕ್ಕಳ ಮಾರಾಟದ ಬಗ್ಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಿಫ್ಟ್ ಕಾರಿನಲ್ಲಿ ಮಗು ಸಾಗಿಸುತ್ತಿದ್ದಾಗ ಸಿಸಿಬಿ ತಂಡ ದಾಳಿ ಮಾಡಿತ್ತು. ಇಪತ್ತು ದಿನದ ಗಂಡು ಮಗುವನ್ನು ರಕ್ಷಣೆ ಮಾಡಲಾಗಿದೆ. ಬಂಧಿತ ಆರೋಪಿಗಳು ತಮಿಳುನಾಡು ಮೂಲದವರು. ಬಡ ಮಹಿಳೆಯರಿಗೆ ಗರ್ಭಧಾರಣೆ ಮಾಡಿಸಿ ಮಗು ಮಾರುತ್ತಿದ್ದರು ಎಂದರು.
8 ರಿಂದ 10 ಲಕ್ಷಕ್ಕೆ ಮಗು ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ತಮಿಳುನಾಡಿನ ಆಸ್ಪತ್ರೆಗಳು, ವೈದ್ಯರು ಮತ್ತು ಬೆಂಗಳೂರಿನ ಓರ್ವ ಮಹಿಳೆ ಮಕ್ಕಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿದ್ದಳು. ಹತ್ತಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಇದೆ. ತಮಿಳುನಾಡಿನ 4 ಆಸ್ಪತ್ರೆಗಳಲ್ಲಿ ಕೃತ್ಯ ನಡೆದಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.