ಮಂಗಳೂರು: ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ ಹೊರತಾಗಿಯೂ ಕಾಲೇಜಿನಲ್ಲಿ ಹಿಜಾಬ್ ಗದ್ದಲ ಮುಂದುವರೆದ ಕಾರಣಕ್ಕಾಗಿ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2 ದಿನ ರಜೆ ಘೋಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಗ್ಗೆ 10 ಮಂದಿ ವಿದ್ಯಾರ್ಥಿಗಳು ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದು, ಇದಕ್ಕೆ ಕೆಲ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರು.
ಈ ವೇಳೆ ಸ್ತಳಕ್ಕೆ ಬಂದ ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಹಿಜಾಬ್ ತೆಗೆದು ತರಗತಿಗೆ ಬರುವಂತೆ ತಿಳಿಸಿದ್ದರು. ಆದರೆ, ಇದಕ್ಕೆ ವಿದ್ಯಾರ್ಥಿಗಳು ನಿರಾಕರಿಸಿದರು. ಈ ವೇಳೆ ಕೆಲ ವಿದ್ಯಾರ್ಥಿಗಳು ಅವರಿಗೆ ಅನುಮತಿ ನೀಡಿದ್ದೇ ಆದರೆ, ನಾವೂ ಕೇಸರಿ ಶಾಲು ಧರಿಸುತ್ತೇವೆಂದು ಹೇಳಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ವಿದ್ಯಾರ್ಥಿಗಳ ಮನವೊಲಿಸಲು ಕಾಲೇಜು ಆಡಳಿತ ಮಂಡಳಿ ಸಾಕಷ್ಟು ಪ್ರಯತ್ನ ನಡೆಸಿದರೂ ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಎರಡು ದಿನಗಳ ಕಾಲ ರಜೆ ಘೋಷಿಸುವಂತಾಯಿತು.
ಘಟನೆ ಸಂಬಂಧ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.