ಮನೆ ಸುದ್ದಿ ಜಾಲ ಕಳಪೆ ಗುಣಮಟ್ಟದ ಆಹಾರ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿ: ಡಾ. ಕೆ...

ಕಳಪೆ ಗುಣಮಟ್ಟದ ಆಹಾರ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿ: ಡಾ. ಕೆ ವಿ ರಾಜೇಂದ್ರ

0

ಮೈಸೂರು: ಆಹಾರಗಳ ಗುಣಮಟ್ಟ ಪರೀಕ್ಷಿಸಿ, ಆಹಾರಗಳಲ್ಲಿ ಕಳಪೆ, ಕಲಬೆರಕೆ ಆಗದಂತೆ ಪರಿಶೀಲನೆ ನಡೆಸಿ, ಕಳಪೆ ಗುಣಮಟ್ಟದ ಆಹಾರ ಪೂರೈಸುವವರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಜಿಲ್ಲಾ ಅಂಕಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.

Join Our Whatsapp Group

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ – 2006 ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೋಟೆಲ್ ಗಳು, ಬೇಕರಿಗಳು ಆಹಾರ ಮಾರಾಟ ಕೇಂದ್ರಗಳಲ್ಲಿ ಕಲಬೆರಕೆ ಮಾಡಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಪ್ರಕರಣಗಳು ಕಂಡು ಬರುತ್ತವೆ. ಇವುಗಳನ್ನು ಪತ್ತೆ ಹಚ್ಚಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅಂಕಿತ ಅಧಿಕಾರಿ ಗಳಿಗೆ ಸೂಚನೆ ನೀಡಿದರು.

ಜನರ ಆರೋಗ್ಯ ಕಾಪಾಡಬೇಕು. ಕೆಟ್ಟ ಕೊಲೆಸ್ಟ್ರಾಲ್ ಇರುವ ಎಣ್ಣೆಯನ್ನು ಬಳಸುತ್ತಾರೆ. ಇದರಿಂದ ಜನರ ಆರೋಗ್ಯ ಹಾಳಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಕಂಡುಬರುತ್ತವೆ. ಆಹಾರ ಉತ್ಪಾದನೆಯಲ್ಲಿ ಸ್ವಚ್ಛತೆಯನ್ನು ಕಪಾಡುವುದಿಲ್ಲ. ಆರೋಗ್ಯಕ್ಕೆ ತೊಂದರೆ ಉಂಟುಮಾಡುವ ಬಣ್ಣಗಳನ್ನು ಬೇಕರಿ ಉತ್ಪನ್ನ ಗಳು, ಸಿಹಿ ತಿಂಡಿಗಳು, ರಸ್ತೆ ಬದಿ ಮಾರುವ ಜಂಕ್ ಫುಡ್ ಗಳ  ತಯಾರಿಕೆಯಲ್ಲಿ ಬಳಸುತ್ತಾರೆ ಇದನ್ನು ಪರಿಶೀಲಿಸಿ ಇಂಥವರ ಮೇಲೆ ಪ್ರಕರಣಗಳನ್ನು ದಾಖಲಿಸಿ ತಡೆಗಟ್ಟಬೇಕು ಎಂದು ತಿಳಿಸಿದರು.

ಆಹಾರ ಉತ್ಪನ್ನಗಳನ್ನು ತಯಾರಿಸುವ ಸಿಬ್ಬಂದಿಗಳು ಸ್ವಚ್ಚತೆಯನ್ನು ಕಾಪಾಡಬೇಕು. ಮಾಂಸ ಹಾಗೂ ಚಿಕನ್ ಅಂಗಡಿ ಯವರು ಸ್ವಚ್ಛತೆಯನ್ನು ಕಾಪಾಡಿಕೊಂಡು, ತ್ಯಾಜ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು.  ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಕಾಲ ಕೆಡದಂತೆ ಕಾಪಾಡಲು ವ್ಯಾಕ್ಸ್ ಬಳಸುತ್ತಾರೆ ಇದರ ಬಳಕೆಯಿಂದ ಆರೋಗ್ಯ ಹಾಳಾಗುತ್ತದೆ ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಅಂಕಿತ ಅಧಿಕಾರಿಗಳಾದ ಡಾ. ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ. ಕೆ ಹರೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪ್ಥಿತರಿದ್ದರು.