ಬೆಂಗಳೂರು(Bengaluru) : ಜಿಎಸ್ ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳಿಗೆ ಜಿಎಸ್ ಟಿ ಪರಿಹಾರವನ್ನು ವಿಸ್ತರಿಸುವ ಬಗ್ಗೆ ಚರ್ಚೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿ ಎಸ್ ಟಿ ಕಾನೂನು ಸಮಿತಿಯು ಕಾನೂನು ತೊಡಕುಗಳನ್ನು ನಿವಾರಣೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಫಿಟ್ ಮೆಂಟ್ ಸಮಿತಿಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ ಎಂದರು.
ಉದಯಪುರದಲ್ಲಿ ಆಗಿರುವುದು ಅಮಾನವೀಯ ಹಾಗೂ ಅತ್ಯಂತ ಹೇಯ ಕೃತ್ಯ. ಇದರ ಹಿಂದೆ ವ್ಯಕ್ತಿ ಗಳಷ್ಟೇ ಅಲ್ಲ ಭಯೋತ್ಪಾದಕ ಸಂಸ್ಥೆ ಗಳಿವೆ. ಇದು ಭಯೋತ್ಪಾದನೆಯ ಒಂದು ಕ್ರಮವಾಗಿದೆ. ಅದರ ಹಿಂದೆ ದೊಡ್ಡ ಅಂತರರಾಷ್ಟ್ರೀಯ ಷಡ್ಯಂತರವಿದೆ. ಅದು ಪತ್ತೆಯಾಗಿ, ಅಪರಾಧಿಗಳನ್ನು ಗಲ್ಲಿಗೇರಿಸಬೇಕು. ರಾಜಸ್ತಾನ ಸರ್ಕಾರ ಸಂಪೂರ್ಣ ತನಿಖೆ ಕೈಗೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂದರು.