ಬೆಂಗಳೂರು: ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ (2018-19ರಲ್ಲಿ) ಹಣಕಾಸು ಅವ್ಯವಹಾರ ಹಾಗೂ ಸುಳ್ಳು ಮಾಹಿತಿ ನೀಡಿದ ಆರೋಪದ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರ ಆದೇಶಿಸಿದೆ.
ಜೂನ್ 9 ರಂದು ತನಿಖೆಗೆ ಆದೇಶಿಸಲಾಗಿದ್ದು, ಈಗ ಇದರ ಪ್ರತಿ ವೈರಲ್ ಆಗುವ ಮೂಲಕ ಇಲಾಖಾ ತನಿಖೆಗೆ ಆದೇಶಿಸಿರುವುದು ಬೆಳಕಿಗೆ ಬಂದಿದೆ.
ಡಿಪಿಎಆರ್ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಹೊರಡಿಸಿರುವ ಆದೇಶದ ಪ್ರಕಾರ, ಕೇಂದ್ರ ನಿಯೋಜನೆಯಲ್ಲಿರುವ ಹಿರಿಯ ಕರ್ನಾಟಕ-ಕೇಡರ್ ಐಎಎಸ್ ಅಧಿಕಾರಿ ಯೋಗೇಂದ್ರ ತ್ರಿಪಾಠಿ ಅವರು ತನಿಖೆಯ ನೇತೃತ್ವ ವಹಿಸಲಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶಿಸಿರುವುದು ಇದು ಮೂರನೇ ಬಾರಿಯಾಗಿದೆ.
ಶಾಸಕ ಸಾರಾ ಮಹೇಶ್ ಅವರು ರೋಹಿಣಿ ವಿರುದ್ಧ ಆರ್ಥಿಕ ಅವ್ಯವಹಾರದ ಸರಣಿ ಆರೋಪ ಮಾಡಿದ್ದರು.
ಸರ್ಕಾರದ ಸರಕುಗಳ ಭಾಗವಾಗಿ 52 ರೂ.ಗೆ ಕಳಪೆ ಗುಣಮಟ್ಟದ ಚೀಲಗಳನ್ನು ಖರೀದಿಸಿದ್ದಾರೆ ಎಂದು ಸಾರಾ ಮಹೇಶ್ ಅವರು ಆರೋಪಿಸಿದ್ದರು. ಅಲ್ಲದೆ, ಇದು ಮಾರುಕಟ್ಟೆಯಲ್ಲಿ 10-13 ರೂ.ಗೆ ಲಭ್ಯವಿದೆ ಎಂದು ಹೇಳಿದ್ದರು.
ಅವರು ತಮ್ಮ ಅಧಿಕೃತ ನಿವಾಸವನ್ನು ಅಕ್ರಮವಾಗಿ ನವೀಕರಿಸಿದ್ದಾರೆ ಮತ್ತು ಈಜುಕೊಳ ಮತ್ತು ಜಿಮ್ ಅನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪಗಳ ನಂತರ, ರೋಹಿಣಿ ಅವರನ್ನು ಆರಂಭದಲ್ಲಿ ಮುಜರಾಯಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಕಳೆದ ವರ್ಷ ಅವರ ವಿರುದ್ಧ ತನಿಖೆಗೆ ಆದೇಶಿಸಿದ ನಂತರ ಯಾವುದೇ ಹುದ್ದೆ ನಿಗದಿ ಮಾಡದೆ ಬಿಡಲಾಗಿದೆ.