ಬೆಂಗಳೂರು: ಬೆಂಗಳೂರು ನಗರದ ಯಲಹಂಕದಲ್ಲಿರುವ ರೈಲ್ವೆ ವೀಲ್ ಫ್ಯಾಕ್ಟರಿಯಲ್ಲಿ ಗಂಭೀರ ಆರೋಪಗಳು ಕೇಳಿಬಂದಿದ್ದು, ಕಂಪನಿಯ 16 ಮಂದಿ ಉದ್ಯೋಗಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಿರಿಯ ಮೆಕ್ಯಾನಿಕ್ ಆಗಿರುವ ಬಸವಲಿಂಗಪ್ಪ ಎಂಬುವವರು ಈ ಕುರಿತು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಕೋರ್ಟ್‌ನ ನಿರ್ದೇಶನದ ನಂತರ ಪ್ರಕರಣ ದಾಖಲಿಸಲಾಗಿದೆ.
ಬಸವಲಿಂಗಪ್ಪ ಅವರು ನೀಡಿದ ದೂರಿನ ಪ್ರಕಾರ, ಅವರಿಗೆ ಪ್ರಕಾರ ಜಾತಿ ನಿಂದನೆ, ಶಾರೀರಿಕ ಅವಮಾನ ಹಾಗೂ ಕೊಲೆಗೆ ಸಂಚು ರೂಪಿಸುವಂತಹ ತೀವ್ರವಾದ ಕೃತ್ಯಗಳು ನಡೆದಿವೆ. ಘಟನೆ ಹಿನ್ನೆಲೆಯಲ್ಲಿ ಶರ್ಟ್ ಕಾಲರ್ ಹಿಡಿದು ಅವಮಾನಿಸಲಾಗಿದೆ ಮತ್ತು ನಿರ್ದಿಷ್ಟವಾಗಿ ಅವರ ಜಾತಿಯನ್ನು ಗುರಿಯಾಗಿಸಿಕೊಂಡು ನಿಂದನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ಹಿನ್ನೆಲೆಯಲ್ಲಿ ನಿಂಗೇಗೌಡ, ಅಬ್ದುಲ್ ಸೇರಿದಂತೆ ಒಟ್ಟು 16 ಮಂದಿ ಉದ್ಯೋಗಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅವರ ವಿರುದ್ಧ ರೈಲ್ವೆ ಕಾಯಿದೆ 1989 ರ ಕೆಲವೊಂದು ವಿಧಿಗಳನ್ನು ಉಲ್ಲಂಘನೆ ಮಾಡಿದ ಆರೋಪವೂ ಸಹ ಕೇಳಿಬಂದಿದೆ.
ದೂರುದಾರ ಬಸವಲಿಂಗಪ್ಪ ಅವರು ಕೇವಲ ಜಾತಿ ನಿಂದನೆಯಲ್ಲ, ತನ್ನ ವೃತ್ತಿ ಜೀವನದಲ್ಲಿಯೂ ತೀವ್ರ ಹಿಂಸೆ ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ. ಪದೋನ್ನತಿ (ಪ್ರಮೋಷನ್) ಮತ್ತು ವೇತನದಲ್ಲಿ ಮುಂಬಡ್ತಿ (salary increment) ನೀಡದೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂಬುದೂ ದೂರಿನಲ್ಲಿ ಉಲ್ಲೇಖವಾಗಿದೆ.
ಈ ಸಂಬಂಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು. ಬೆಂಗಳೂರಿನ 71ನೇ ಸಿಸಿಎಚ್ ನ್ಯಾಯಾಲಯ ಈ ಕುರಿತು ತನಿಖೆಗೆ ಆದೇಶ ನೀಡಿದ್ದು, ಅದರ ಅನ್ವಯವಾಗಿ ಯಲಹಂಕ ಪೊಲೀಸ್ ಠಾಣೆ ಮೊದಲು ಪ್ರಾಥಮಿಕ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದೆ.














