ಔರಂಗಬಾದ್ (ಮಹಾರಾಷ್ಟ್ರ): ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ 7 ಜನರು ಸಾವನ್ನಪ್ಪಿರುವ ದುರ್ಘಟನೆ ಛತ್ರಪತಿ ಸಂಬಾಜಿನಗರದ ಕ್ಯಾಂಪ್ ಪ್ರದೇಶದ ಜೈನ ಮಂದಿರದ ಬಳಿ ನಡೆದಿದೆ.
ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕಂಟೋನ್ಮೆಂಟ್ ಪೊಲೀಸರು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಮೃತಪಟ್ಟಿದ್ದಾರೆ.
ಅಸೀಂ ವಾಸಿಂ ಶೇಖ್ (3), ಪಾರಿ ವಾಸಿಂ ಶೇಖ್ (2), ವಾಸಿಂ ಶೇಖ್ (30), ತನ್ವೀರ್ ವಾಸಿಂ (23), ಹಮೀದಾ ಬೇಗಂ (50), ಶೇಖ್ ಸೊಹೈಲ್ 35 ವರ್ಷ, ರೇಷ್ಮಾ ಶೇಖ್ (22) ಮೃತರು ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ನೆಲಮಹಡಿಯಲ್ಲಿದ್ದ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಘಟನೆ ಕುರಿತು ಪೊಲೀಸ್ ಕಮಿಷನರ್ ಮನೋಜ್ ಲೋಹಿಯಾ ಪ್ರತಿಕ್ರಿಯಿಸಿ, “ಕಂಟೋನ್ಮೆಂಟ್ ಪ್ರದೇಶದಲ್ಲಿನ ಗಾರ್ಮೆಂಟ್ಸ್ ಅಂಗಡಿಯಲ್ಲಿ ಬೆಳಗಿನ ಜಾವ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಗಾಢ ನಿದ್ರೆಯಲ್ಲಿದ್ದ ಒಂದೇ ಕುಟುಂಬದ 7 ಜನರು ಸಾವನ್ನಪ್ಪಿದ್ದಾರೆ. ಮೊದಲಿಗೆ ಆರು ಇದ್ದ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ ಎರಡು ಮತ್ತು ಮೂರು ವರ್ಷದ ಮಗು ಕೂಡ ಬೆಂಕಿಗೆ ಆಹುತಿಯಾಗಿವೆ. ಎಲ್ಲ ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ.