ಆಂಧ್ರ ಪ್ರದೇಶದ ಕರ್ನೂಲ್ ಬಳಿ ಖಾಸಗಿ ಬಸ್ ಬೆಂಕಿಗಾಹುತಿಯಾಗಿದೆ. ಈ ಬಸ್ನಲ್ಲಿ 46 ಪ್ರಯಾಣಿಕರಿದ್ದರು. ಆಂಧ್ರಪ್ರದೇಶದಲ್ಲಿ ಖಾಸಗಿ ಬಸ್ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನೂಲ್ನಲ್ಲಿ ಆಂಧ್ರಪ್ರದೇಶದ ಗೃಹ ಸಚಿವೆ ವಂಗಲಪುಡಿ ಅನಿತಾ ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರು ಈ ಬೆಂಕಿ ಅಪಘಾತದ ಬಗ್ಗೆ ನಿಖರವಾದ ಮಾಹಿತಿ ನೀಡಿದ್ದಾರೆ.
ಇಂದು ಬೆಂಕಿ ಅವಘಡಕ್ಕೆ ತುತ್ತಾದ ಬಸ್ನಲ್ಲಿ ಪ್ರಯಾಣಿಸುತ್ತಿದ್ದವರ ಅಧಿಕೃತ ಮಾಹಿತಿ ಲಭ್ಯವಾಗಿದೆ. ಒಟ್ಟು ಪ್ರಯಾಣಿಕರ ಸಂಖ್ಯೆ 46. ಅವರಲ್ಲಿ 39 ಜನ ಹಿರಿಯ ಪ್ರಯಾಣಿಕರು, 4 ಜನ ಮಕ್ಕಳು, 2 ಚಾಲಕರು ಸೇರಿ 45 ಜನರು ಬಸ್ನಲ್ಲಿದ್ದರು.
ಆದರೆ, ಮಾರ್ಗ ಮಧ್ಯೆ ಓರ್ವ ಅಪರಿಚಿತ ಪ್ರಯಾಣಿಕ ಬಸ್ ಹತ್ತಿಕೊಂಡಿದ್ದ. ಹೀಗಾಗಿ, ಬಸ್ನಲ್ಲಿದ್ದ 45 ಜನರ ಗುರುತು ಪತ್ತೆಯಾಗಿದೆ. ಆದರೆ, ಉಳಿದ ಓರ್ವನ ಮಾಹಿತಿ ಸಿಕ್ಕಿಲ್ಲ. ಈ ಪೈಕಿ 18 ಹಿರಿಯ ಪ್ರಯಾಣಿಕರು, 2 ಮಕ್ಕಳು ಸೇರಿ 20 ಜನ ಸಾವನ್ನಪ್ಪಿದ್ದಾರೆ.
ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತದ ವಿಚಾರ ತಿಳಿದು ತುಂಬಾ ನೋವಾಗಿದೆ. ಬೈಕ್ಗೆ ಬಸ್ ಡಿಕ್ಕಿ ಹೊಡೆದ ದುರಂತ ಸಂಭವಿಸಿದೆ. ಇಬ್ಬರು ಮಕ್ಕಳು ಸೇರಿದಂತೆ 20 ಪ್ರಯಾಣಿಕರು ಮೃತಪಟ್ಟಿದ್ದಾರೆ. ಬೈಕ್ ಸವಾರ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆಲವರು ಗುರುತು ಸಿಗದ ರೀತಿಯಲ್ಲಿ ಸುಟ್ಟುಹೋಗಿದ್ದಾರೆ.
ಹೀಗಾಗಿ ಡಿಎನ್ಎ ಪರೀಕ್ಷೆ ನಡೆಸಿ ಮೃಹದೇಹ ಹಸ್ತಾಂತರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. 27 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಆಂಧ್ರದ ಗೃಹ ಸಚಿವೆ ಅನಿತಾ ಮಾಹಿತಿ ನೀಡಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ 16 ತಂಡದಿಂದ ಮಾದರಿ ಸಂಗ್ರಹಿಸಲಾಗುತ್ತಿದೆ. ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬಸ್ ದುರಂತದ ಬಗ್ಗೆ ತನಿಖೆಗೆ 4 ವಿಶೇಷ ತಂಡ ರಚಿಸಲಾಗುವುದು ಎಂದು ಕರ್ನೂಲ್ನಲ್ಲಿ ಆಂಧ್ರದ ಗೃಹ ಸಚಿವೆ ವಂಗಲಪುಡಿ ಅನಿತಾ ಹೇಳಿದ್ದಾರೆ.
ಆಂಧ್ರಪ್ರದೇಶದ ಸಾರಿಗೆ ಸಚಿವ ರಾಮಪ್ರಸಾದ್ ರೆಡ್ಡಿ ಕೂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಈ ಅಪಘಾತವು ಬೆಳಗಿನ ಜಾವ 3ರಿಂದ 3.15ರ ನಡುವೆ ಸಂಭವಿಸಿದೆ. ಬೈಕ್ ಅನ್ನು ಬಸ್ 15ರಿಂದ 20 ಮೀಟರ್‌ಗಳಷ್ಟು ದೂರಕ್ಕೆ ಎಳೆದೊಯ್ದಿದೆ. ಇದು ಕಿಡಿ ಹೊತ್ತಿಕೊಳ್ಳಲು ಕಾರಣವಾಯಿತು. ಈ ಅಪಘಾತಕ್ಕೆ ಪ್ರಾಥಮಿಕವಾಗಿ ಬೆಂಕಿ ಕಿಡಿಯೇ ಕಾರಣವಾಗಿದೆ.
2 ಮಕ್ಕಳು ಸೇರಿದಂತೆ ಒಟ್ಟು 20 ಜನರು ಸಾವನ್ನಪ್ಪಿದ್ದಾರೆ. ಪ್ರಯಾಣಿಕರಲ್ಲಿ 39 ವಯಸ್ಕರು, 4 ಮಕ್ಕಳು ಮತ್ತು ಇಬ್ಬರು ಚಾಲಕರು ಬಸ್ ನಲ್ಲಿದ್ದರು. 27 ಜನರು ಅಪಘಾತದಿಂದ ಸುರಕ್ಷಿತವಾಗಿ ಪಾರಾಗಿದ್ದಾರೆ. 27 ಜನರ ಪೈಕಿ 9 ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ 6 ಮಂದಿ ಆಂಧ್ರಪ್ರದೇಶದವರು. 6 ಮಂದಿ ತೆಲಂಗಾಣದವರು ಮತ್ತು ಇನ್ನೂ ಕೆಲವರು ಇತರ ರಾಜ್ಯಗಳವರಿದ್ದಾರೆ. ಚಾಲಕ ನಮ್ಮ ವಶದಲ್ಲಿದ್ದಾನೆ, ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಡಿಎನ್ಎ ಪರೀಕ್ಷೆಗಾಗಿ 10 ತಂಡಗಳು ಕೆಲಸ ಮಾಡುತ್ತಿವೆ. 4 ತಂಡಗಳು ಅಗ್ನಿ ಅವಘಡದ ಬಗ್ಗೆ ಕೆಲಸ ಮಾಡುತ್ತಿವೆ. ಮೃತರ ಕುಟುಂಬಗಳಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಎಲ್ಲಾ ಆಯಾಮಗಳಿಂದ ತನಿಖೆಗೆ ಆದೇಶಿಸಿದ್ದಾರೆ. ಈ ತನಿಖೆಯಲ್ಲಿ ಎಲ್ಲಾ ಸಮಸ್ಯೆಗಳು ಬಹಿರಂಗಗೊಳ್ಳಲಿವೆ. ನಾವು 3 ಇಲಾಖೆಗಳೊಂದಿಗೆ ಸಮಿತಿಯನ್ನು ರಚಿಸುತ್ತೇವೆ ಎಂದಿದ್ದಾರೆ.
ಹೊಸ ವಾಹನಗಳಲ್ಲಿ ಸ್ವಯಂಚಾಲಿತ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಇದೆ. ಆದರೆ, ಇದು ಹಳೆಯ ಬಸ್ ಆದ್ದರಿಂದ ಇದರಲ್ಲಿ ಇಲ್ಲ. ಎಲ್ಲಾ ಬಸ್ ಬಾಡಿ ನಿರ್ಮಾಣವನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮಾಡಲಾಗುತ್ತದೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ವಿದೇಶ ಪ್ರವಾಸದಲ್ಲಿರುವ ಸಿಎಂ ಚಂದ್ರಬಾಬು ಮೃತರಿಗೆ 5 ಲಕ್ಷ ರೂ. ಪರಿಹಾರ ಮತ್ತು ಗಾಯಗೊಂಡವರಿಗೆ 2 ಲಕ್ಷ ರೂ. ಪರಿಹಾರ ನೀಡಲು ಆದೇಶ ನೀಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಖಾಸಗಿ ಬಸ್ ಅಗ್ನಿ ದುರಂತ ನಡೆದಿದ್ದು ವೇಮೂರಿ ಸುಬ್ಬರಾವ್ ಒಡೆತನದ ಕಾವೇರಿ ಟ್ರಾವೆಲ್ಸ್ನಲ್ಲಿ. 2018ರಿಂದಲೂ ಕಾರ್ಯ ನಿರ್ವಹಿಸುತ್ತಿರುವ ಈ ಟ್ರಾವೆಲ್ಸ್ನಲ್ಲಿ ಕರ್ತವ್ಯದಲ್ಲಿದ್ದ ಇಬ್ಬರೂ ಸಹ ಅನುಭವಿ ಬಸ್ ಚಾಲಕರು. ಓರ್ವ ಚಾಲಕ ಆಂಧ್ರಪ್ರದೇಶದ ಕನಿಗೇರಿ ಗ್ರಾಮದ ನಿವಾಸಿ. ಮತ್ತೊಬ್ಬ ಚಾಲಕ ನರಸರಾವ್ ಪೇಟ ಪಟ್ಟಣದ ನಿವಾಸಿ. ಹೈದರಾಬಾದ್, ಬೆಂಗಳೂರು ಸೇರಿ ಹಲವೆಡೆ ಕಾವೇರಿ ಟ್ರಾವೆಲ್ಸ್ ಶಾಖೆಗಳಿವೆ ಎಂದು ತಿಳಿದುಬಂದಿದೆ.















