ಲಂಡನ್(London): ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು ಇಂಗ್ಲೆಂಡ್ ತಂಡವನ್ನು 110 ರನ್ ಗಳಿಗೆ ಕಟ್ಟಿ ಹಾಕಿದೆ.
ಇಲ್ಲಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಮೊದಲನೇ ಓಡಿಐ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಇಂಗ್ಲೆಂಡ್ ತಂಡ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಬಳಿಕ ಭಾರತ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ 25.2 ಓವರ್‌ಗಳಲ್ಲಿ 110 ರನ್‌ಗಳಿಗೆ ಸರ್ವಪತನ ಕಂಡಿದೆ.
ಜೇಸನ್ ರಾಯ್ ಹಾಗೂ ಜೋ ರೂಟ್ ಅವರನ್ನು ಶೂನ್ಯಕ್ಕೆ ಜಸ್‌ಪ್ರೀತ್ ಬುಮ್ರಾ ಔಟ್ ಮಾಡಿದ್ದರೆ, ಮೊಹಮ್ಮದ್ ಶಮಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಡಕ್‌ಔಟ್ ಮಾಡಿದ್ದಾರೆ. 3 ಓವರ್‌ಗಳ ಅಂತ್ಯಕ್ಕೆ ಇಂಗ್ಲೆಂಡ್ 15 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಜೋಸ್ ಬಟ್ಲರ್ (30), ಡೇವಿಡ್ ವಿಲ್ಲಿ (21) ನಿಧಾನವಾಗಿ ರನ್ ಗಳಿಸಲಾರಂಭಿಸಿದರಾದರೂ, ಭಾರತದ ಬೌಲರ್‌ಗಳ ಪಾರಮ್ಯದ ಮುಂದೆ ಇಂಗ್ಲೆಂಡ್ ಮಂಕಾಯಿತು.
ಅಂತಿಮವಾಗಿ 25.2 ಓವರ್‌ಗಳಲ್ಲಿ 110ಕ್ಕೆ ಇಂಗ್ಲೆಂಡ್ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ಜಸ್ಪ್ರಿತ್ ಬೂಮ್ರಾ 6 ವಿಕೆಟ್ ಗಳಿಸಿ ಮಿಂಚಿದರು. ಮೊಹಮದ್ ಶಮಿ 3 ವಿಕೆಟ್ ಪಡೆದರೆ, ಪ್ರಸಿದ್ಧ ಕೃಷ್ಣ ಒಂದು ವಿಕೆಟ್ ಪಡೆದರು.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2-1 ಅಂತರದಲ್ಲಿ ಟಿ20 ಸರಣಿಯನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಅದೇ ವಿಶ್ವಾಸದಲ್ಲಿ ಏಕದಿನ ಪಂದ್ಯವನ್ನು ಮುಡಿಗೇರಿಸಿಕೊಳ್ಳಲು ಉತ್ತಮ ಶುಭಾರಂಭ ಮಾಡಿದೆ. ಅಂದಹಾಗೆ ಮೂರನೇ ಟಿ20 ಪಂದ್ಯದಲ್ಲಿ ಗ್ರೋಯಿನ್ ಇಂಜುರಿಗೆ ಒಳಗಾಗಿದ್ದ ವಿರಾಟ್ ಕೊಹ್ಲಿ ಆರಂಭಿಕ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟ್ ಮಾಡಲಿದ್ದಾರೆ.