ಮನೆ ಶಿಕ್ಷಣ ನಾಳೆಯಿಂದ DCET-2025ಕ್ಕೆ ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭ

ನಾಳೆಯಿಂದ DCET-2025ಕ್ಕೆ ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭ

0

ಬೆಂಗಳೂರು: ಡಿಪ್ಲೊಮಾ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್‌ನ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಕಲ್ಪಿಸುವ ಸಂಬಂಧ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜುಲೈ 3ರಿಂದ ಆರಂಭಿಸಲಿದ್ದು, ಫಲಿತಾಂಶವನ್ನು ಜುಲೈ 9ರಂದು ಪ್ರಕಟಿಸಲಿದೆ.

ಅಭ್ಯರ್ಥಿಗಳು ತಮಗೆ ಬೇಕಾದ ಕೋರ್ಸ್‌ ಹಾಗೂ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು, ಆದ್ಯತಾ ಕ್ರಮದಲ್ಲಿ ದಾಖಲಿಸಲು ಜುಲೈ 5ರಂದು ಬೆಳಿಗ್ಗೆ 11ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ತಿಳಿಸಿದ್ದಾರೆ.

ಜುಲೈ 7ರಂದು ಅಣಕು ಸೀಟು ಹಂಚಿಕೆ ಫಲಿತಂಶವನ್ನು ಪ್ರಕಟಿಸಲಾಗುತ್ತದೆ. ಬಳಿಕ ಅಭ್ಯರ್ಥಿಗಳು ತಮ್ಮ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳಲು ಜುಲೈ 8ರಂದು ಸಂಜೆ 4ಗಂಟೆವರೆಗೆ ಅವಕಾಶ ಇರುತ್ತದೆ. ಅಂತಿಮವಾಗಿ ಜುಲೈ 9ರಂದು ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದರು.

ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಛಾಯ್ಸ್‌ ಅನ್ನು ಆಯ್ಕೆ ಮಾಡಲು ಜು.10ರಿಂದ 13ರವರೆಗೆ ಅವಕಾಶ ಇರುತ್ತದೆ. ಛಾಯ್ಸ್-1 ಮತ್ತು 2 ಅನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಚಲನ್‌ ಡೌನ್‌ ಲೋಡ್‌ ಮಾಡಿಕೊಳ್ಳಬಹುದು. ಛಾಯ್ಸ್‌ -1 ಆಯ್ಕೆ ಮಾಡಿ ಶುಲ್ಕ ಪಾವತಿಸಿದ ಅಭ್ಯರ್ಥಿಗಳು ಸೀಟು ಖಾತರಿ ಚೀಟಿ ಡೌನ್‌ಲೋಡ್‌ ಮಾಡಿಕೊಂಡು ಜುಲೈ 16ರೊಳಗೆ ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಪ್ರಸನ್ನ ಅವರು ವಿವರಿಸಿದ್ದಾರೆ.