ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯ ಮಾರ್ಗ ಸಂಚರಿಸುವ ಅಂತರ ರಾಜ್ಯ ವಾಹನಗಳಿಗೆ ಪ್ರವೇಶ ಶುಲ್ಕ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.
ಈಗ ಟೋಲ್ ಜೊತೆಗೆ ಬಂಡೀಪುರ ಪ್ರವೇಶಕ್ಕೂ ಶುಲ್ಕ ಕಟ್ಟಬೇಕಿದೆ.
ಪ್ರತಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಅಂತರ ರಾಜ್ಯ ವಾಹನಗಳು ಸಂಚರಿಸುತ್ತಿದ್ದು, ವನ್ಯಜೀವಿ ಅಪಘಾತ ತಡೆಯಲು, ವೀಕ್ಷಣಾ ರೇಖೆ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹಾಗೂ ಪ್ಲಾಸ್ಟಿಕ್ ಮುಕ್ತ ರಸ್ತೆಯಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಬಂಡಿಪುರದ ಮಾರ್ಗ ಮಧ್ಯೆ ಹಾದುಹೋಗುವ 4 ಚೆಕ್ ಪೋಸ್ಟ್ ಗಳಲ್ಲಿ ಪ್ರವೇಶ ಶುಲ್ಕ ಕಟ್ಟಲು ವ್ಯವಸ್ಥೆ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 181 ಗುಂಡ್ಲುಪೇಟೆ -ಊಟಿ ರಸ್ತೆ ಮಾರ್ಗ ಮೇಲುಕಾಮನಹಳ್ಳಿ ಮತ್ತು ಕೆಕ್ಕನಹಳ್ಳ ಚೆಕ್ ಪೋಸ್ಟ್ , ರಾಷ್ಟ್ರೀಯ ಹೆದ್ದಾರಿ 766 ಗುಂಡ್ಲುಪೇಟೆಯಿಂದ ಕ್ಯಾಲಿಕಟ್ ರಸ್ತೆ ಮಾರ್ಗ ಮೂಲೆಹೊಳೆ ಚೆಕ್ ಪೋಸ್ಟ್ ಮತ್ತು ಮದ್ದೂರು ಚೆಕ್ ಪೋಸ್ಟ್ ಬಳಿ ಶುಲ್ಕ ಕಟ್ಟಲು ಸೂಚನೆ ನೀಡಿದ್ದಾರೆ. ಲಘು ವಾಹನಗಳಿಗೆ ₹ 20, ಭಾರಿ ವಾಹನಗಳಿಗೆ ₹ 50 ದರ ನಿಗದಿ ಮಾಡಿ ಬಂಡಿಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ನೋಂದಣಿ ಹೊರತುಪಡಿಸಿ ಅನ್ಯರಾಜ್ಯದ ವಾಹನಗಳಿಗೆ ಅರಣ್ಯ ಇಲಾಖೆ ಶುಲ್ಕ ವಿಧಿಸಿದೆ.