ಮನೆ ಸುದ್ದಿ ಜಾಲ ಜನಪದ ವೈದ್ಯ ಪದ್ಧತಿಯನ್ನು ಉಳಿಸಿಕೊಳ್ಳಬೇಕಿದೆ: ಪ್ರೊ.ಕೆ. ಶಿವಚಿತ್ತಪ್ಪ

ಜನಪದ ವೈದ್ಯ ಪದ್ಧತಿಯನ್ನು ಉಳಿಸಿಕೊಳ್ಳಬೇಕಿದೆ: ಪ್ರೊ.ಕೆ. ಶಿವಚಿತ್ತಪ್ಪ

0

ಮಂಡ್ಯ: ಕಡಿಮೆ ವೆಚ್ಚದಲ್ಲಿ ರೋಗಗಳನ್ನು ಗುಣಮುಖವಾಗಿಸುವ ನಾಟಿ ವೈದ್ಯ ಪದ್ಧತಿ ಅಥವಾ ಜನಪದ ವೈದ್ಯ ಪದ್ಧತಿಯನ್ನು ಜೀವಂತವಾಗಿ ಉಳಿಸಬೇಕಿದೆ ಎಂದು ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಕೆ. ಶಿವಚಿತ್ತಪ್ಪ ಅವರು ಹೇಳಿದರು.

ಇಂದು (ಜೂ.26) ಕರ್ನಾಟಕ ಜಾನಪದ ಅಕಾಡೆಮಿ, ಮಂಡ್ಯ ವಿಶ್ವವಿದ್ಯಾನಿಲಯ, ಕರ್ನಾಟಕ ಸಂಘ, ಜಾನಪದ ಜನ್ನೆಯರ ವತಿಯಿಂದ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಯೋಜಿಸಲಾಗಿದ್ದ “ವರ್ತಮಾನದಲ್ಲಿ ಜನಪದ ವೈದ್ಯ” ವಿಚಾರ ಸಂಕಿರಣ ಹಾಗೂ ಸಂವಾದದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿದತ್ತವಾಗಿ ಬೆಳೆಯುವ ಗಿಡಗಳನ್ನು ಬಳಸಿಕೊಂಡು ರೋಗಿಗಳ ಗುಣಪಡಿಸುವ ವಿಧಾನ ಇಂದಿಗೂ ಜೀವಂತವಾಗಿದೆ, ಹಿರಿಯರು ಅಲರ್ಜಿ ಉಂಟಾದರೆ ಅಮೃತಬಳ್ಳಿ ಕಷಾಯ, ಕೋಳಿ ಜ್ವರ ಬಂದರೆ ತುಳಸಿ ಅಮೃತಬಳ್ಳಿ ಕಷಾಯ, ಕಾಲಲಿ ಅಣಿ ಇದ್ದರೆ ಉತ್ತರಾಯಣ ಸೊಪ್ಪು ಕಟ್ಟಿ ರೋಗಗಳನ್ನು ಗುಣಪಡಿಸುತ್ತಿದ್ದರು ಎಂದು ಹೇಳಿದರು.

ಪ್ರಾಥಮಿಕ ತುರ್ತು ಚಿಕಿತ್ಸೆ ಮಾಡಬೇಕಾದಾಗ ಮನೆ ಚಿಕಿತ್ಸೆ ಅತಿ ಮುಖ್ಯ, ಅಂತಹಾ ಸಂದರ್ಭದಲ್ಲಿ ಬಳಸಿಕೊಳ್ಳಬೇಕಾದ ನಮ್ಮ ಸುತ್ತಮುತ್ತಲಿನ ಗಿಡ ಮೂಲಿಕೆಗಳ ಬಗ್ಗೆ ತಿಳಿದಿರಬೇಕು, ನಾಟಿ ವೈದ್ಯ ಪದ್ಧತಿಯಲ್ಲಿ ನಾಲ್ಕು ಹಂತದ ಚಿಕಿತ್ಸೆಯನ್ನು ಕಾಣಬಹುದಾಗಿದೆ ಅವುಗಳೆಂದರೆ ಮೂಲಿಕೆ ಚಿಕಿತ್ಸೆ, ಆಹಾರ ಚಿಕಿತ್ಸೆ, ಮಾನಸಿಕ ಚಿಕಿತ್ಸೆ ಹಾಗೂ ಶಾರೀರಿಕ ಚಿಕಿತಸೆ ಎಂದರು.

ರೋಗಗಳನ್ನು ಗುಣಪಡಿಸುವುದು ನಾಟಿ ವೈದ್ಯ ಪದ್ಧತಿಯ ಬಹು ಮುಖ್ಯ ಉದ್ದೇಶ. ನಾಟಿ ವೈದ್ಯ ಪದ್ಧತಿಯ ಕುರಿತಾಗಿ ಹೆಚ್ಚಿನ ಸಂಶೋಧನೆಗಳು ಆಗಬೇಕು ಇದರ ಕುರಿತಾಗಿ ಜಾಗೃತಿಯ ಅಗತ್ಯವಿದೆ, ರಾಜ್ಯ ಸರ್ಕಾರ ನಾಟಿ ವೈದ್ಯ ಪದ್ಧತಿಯ ಕುರಿತಾಗಿ ನಿಗಮ ಸ್ಥಾಪಿಸಬೇಕು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ಗೌಡ ಅವರು ಮಾತನಾಡಿ ಯುವ ಜನತೆ ಪದವಿಗಳನ್ನು ಮಾನದಂಡ ಮಾಡಿಕೊಳ್ಳದೆ ತಮ್ಮ ಕೆಲಸ ಕಾರ್ಯಗಳನ್ನು ಮಾನದಂಡ ಮಾಡಿಕೊಳ್ಳಿ, ಜಾನಪದ ಕಲೆಗಳು ಸಂಪೂರ್ಣವಾಗಿ ನಶಿಸಿ ಹೋಗುತ್ತಿರುವ ಕಾಲದಲ್ಲಿ ನಾವಿದ್ದೇವೆ, ನಮ್ಮ ರಾಜಕಾರಣಿಗಳು ಸಾಂಸ್ಕೃತಿಕ ಪ್ರಜ್ಞೆಯ ಜೊತೆಗೆ ಇತಿಹಾಸದ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು, ಯುವ ಪೀಳಿಗೆ ಆಸಕ್ತಿವಹಿಸಿ ಜನಪದ ಕಲೆಗಳನ್ನು ಸಂರಕ್ಷಿಸಬೇಕಿದೆ ಎಂದು ಕಿವಿಮಾತು ಹೇಳಿದರು.

ಮಂಡ್ಯ ವಿಶ್ವವಿದ್ಯಾನಿಲಯದ ಬೆಳವಣಿಗೆಯನ್ನು ನೋಡಿಕೊಂಡು ಬೆಳೆದವನು ನಾನು. ಮಂಡ್ಯದಲ್ಲಿ ವಿಶ್ವ ವಿದ್ಯಾಲಯ, ಇಂಜಿನಿಯರಿAಗ್ ಕಾಲೇಜು, ಕೃಷಿ ವಿಶ್ವವಿದ್ಯಾಲಯ, ವೈದ್ಯಕೀಯ ಕಾಲೇಜು ನೋಡುತ್ತೇನೆ ಎಂದು ಅಂದುಕೊAಡಿರಲಿಲ್ಲ ಇಂದು ಮಂಡ್ಯದಲ್ಲಿ ಎಲ್ಲವೂ ಇದೆ ಇವುಗಳನ್ನು ಸರಿಯಾಗಿ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಪ್ರಸ್ತುತ ಸನ್ನಿವೇಶದಲ್ಲಿ ಜನಪದವನ್ನು ಬೆಳೆಸುವ ಕೆಲಸವಾಗಬೇಕಿದೆ. ಇಂದಿನ ಯುವ ಜನತೆಗೆ ಪರಿಸರ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮಾಡಿಕೊಳುವ ಹಾದಿಯಲ್ಲಿ ಸಾಗಬೇಕಿದೆ ಎಂದರು.

ಗಿಡ ಮರಗಳಿಗಿರುವ ಸೌಜನ್ಯ ಮತ್ತು ಸಂಸ್ಕಾರ ಎಲ್ಲರಿಗೂ ಬರಬೇಕು ಎಂಬುವುದೇ ಜನಪದದ ಉದ್ದೇಶ ಎಂದು ಭಾವಿಸಿದ್ದೇನೆ. ನಾಳೆಗಳನ್ನು ನೋಡಬೇಕಾದವರು ನಾಳೆಗಳನ್ನು ಕಟ್ಟಬೇಕಾದವರು ಯುವಕರು ಸಮಾಜ ಸತ್ಯಗಳನ್ನು ಶೋಧಿಸುವಲ್ಲಿ ವಿಫಲರಾಗುತ್ತಿದ್ದಿರಾ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಾನಪದ ಜನ್ನೆಯರ ಅಧ್ಯಕ್ಷೆ ಡಾ. ಮಂಗಳಾ ಎಸ್.ಸಿ. ಮಂಡ್ಯ ವಿಶ್ವವಿದ್ಯಾನಿಲಯದ ಕುಲಸಚಿವೆ (ಆಡಳಿತ) ವೀಣಾ ಬಿ.ಎನ್, ಮಂಡ್ಯ ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಡಾ. ಯೋಗಾನರಸಿಂಹಾಚಾರಿ ಕೆ, ಜಾನಪದ ವಿದ್ವಾಂಸರಾದ ಪ್ರೊ.ವ.ನಂ ಶಿವರಾಮು, ಡಾ. ರಾಗೌ, ಡಾ. ಡಿ.ಕೆ ರಾಜೇಂದ್ರ, ನಾಟಿ ವೈದ್ಯ ಈಶ್ವರ್ ಕುಮಾರ್ ಎಚ್.ಸಿ, ಮಂಡ್ಯ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ವಿ.ಎನ್. ನಾಗರಾಜು, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಎಸ್ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.