ಮನೆ ಆರೋಗ್ಯ ವ್ಯಾಯಾಮದ ಬಳಿಕ ಸೇವಿಸಬೇಕಾದ ಆಹಾರಗಳು

ವ್ಯಾಯಾಮದ ಬಳಿಕ ಸೇವಿಸಬೇಕಾದ ಆಹಾರಗಳು

0

ವ್ಯಾಯಾಮ ಮಾಡಿದ ನಂತರ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಅವಶ್ಯಕತೆ ಇರುವುದರಿಂದ ಸರಿಯಾದ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು. ವ್ಯಾಯಾಮವಾದ ಬಳಿಕ ಸೇವಿಸಬೇಕಾದ ಆಹಾರಗಳ ಕುರಿತ ಮಾಹಿತಿ ಇಲ್ಲಿದೆ.

ಮೊಳಕೆ ಕಟ್ಟಿದ ಕಾಳುಗಳು

ಅತ್ಯುತ್ತಮ ಆಹಾರಗಳ ಪಟ್ಟಿಗೆ ಸೇರಿರುವ ಮೊಳಕೆ ಕಟ್ಟಿದ ಕಾಳುಗಳನ್ನು ಎಷ್ಟು ಹೊಗಳಿದರೂ ಸಾಲದು! ಮೊಳಕೆ ಕಟ್ಟಿದ ಕಾಳುಗಳು ಸಂಪೂರ್ಣ ಪೋಷಕಾಂಶಳಿಂದ ಕೂಡಿದ್ದು, ಆರೋಗ್ಯಕ್ಕೆ ಅಗತ್ಯವಾದ ಶಕ್ತಿ ಹಾಗೂ ಪೋಷಣೆಯನ್ನು ನೀಡುವುದು. ಅದರಲ್ಲೂ ದೈಹಿಕ ಕಸರತ್ತು ಮಾಡಿದ ಬಳಿಕ, ಒಂದು ಸಣ್ಣ ಕಪ್ ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸುವುದರಿಂದ, ದೇಹಕ್ಕೆ ಪೋಷಕಾಂಶಗಳು ಸಿಗುವುದರಿಂದ, ದಿನ ಪೂರ್ತಿ ಚೈತನ್ಯದಿಂದ ಇರಲು ಸಹಕಾರಿಯಾಗಿರುವಂತೆ ನೋಡಿಕೊಳ್ಳುತ್ತವೆ, ಜೊತೆಗೆ ದೇಹದ ತೂಕ ಇಳಿಸುವಲ್ಲಿ ನೆರವಾಗುತ್ತದೆ. ಇನ್ನು ನೆನೆಸಿದ ಕಾಳುಗಳನ್ನು ಅಥವಾ ಮೊಳಕೆ ಕಟ್ಟಿದ ಕಾಳುಗಳನ್ನು ಸ್ವಲ್ಪ ಸಾವಯವ ಬೆಲ್ಲ ಅಥವಾ ಹಸಿ ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುವ ಅಭ್ಯಾಸ ಮಾಡಿ ಕೊಂಡರೆ, ಒಳ್ಳೆಯ ಆರೋಗ್ಯ ಪ್ರಯೋಜನಗಳು ನಿಮಗೆ ಲಭ್ಯವಾಗುತ್ತವೆ.

ನೀರಿನಾಂಶ ಹೆಚ್ಚಿರುವ ಹಣ್ಣುಗಳು

ವ್ಯಾಯಾಮದ ಸಂದರ್ಭದಲ್ಲಿ ಅತಿಯಾಗಿ ಬೆವರುವುದರಿಂದ, ನಮ್ಮ ದೇಹದಲ್ಲಿರುವ ಸೋಡಿಯಂ ಮತ್ತು ಪೊಟ್ಯಾಷಿಯಂ ಅಂಶಗಳು ಕಡಿಮೆ ಆಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲದೇ ನೀರಿನಾಂಶ ಕೂಡ ಕಡಿಮೆ ಆಗುವುದರಿಂದ ನಮಗೆ ನಿರ್ಜಲೀಕರಣ ಸಮಸ್ಯೆ ತಲೆದೋರುತ್ತದೆ. ಹಾಗಾಗಿ ಈ ಸಮಯದಲ್ಲಿ ನೀರಿನಾಂಶ ಹೆಚ್ಚಿಸುವ ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು. ಉದಾಹರಣೆಗೆ ಖರ್ಬೂಜ ಹಣ್ಣು, ಕಲ್ಲಂಗಡಿ ಹಣ್ಣು, ಸೌತೆಕಾಯಿ, ಸ್ಟ್ರಾಬೆರಿ ಹಣ್ಣುಗಳು, ಇತ್ಯಾದಿ.

ದಾಳಿಂಬೆ ಹಣ್ಣಿನ ಜ್ಯೂಸ್

ವ್ಯಾಯಾಮ ಅಥವಾ ವಾಕಿಂಗ್ ಜಾಗಿಂಗ್ ಮಾಡಿದ ಬಳಿಕ, ದೇಹಕ್ಕೆ ಆಯಾಸ ಆಗುವುದರ ಸ್ವಲ್ಪ ಬಾಯಾರಿಕೆಯೂ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಕೇವಲ ನೀರನ್ನು ಅಥವಾ ಎನರ್ಜಿ ಡ್ರಿಂಕ್ಸ್ ಕುಡಿಯುವುದೊಂದೇ ಪರಿಹಾರವಲ್ಲ! ಇವುಗಳ ಬದಲು ಮನೆಯಲ್ಲಿಯೇ ಮಾಡಿದ ದಾಳಿಂಬೆ ಹಣ್ಣಿನ ಜ್ಯೂಸ್‌, ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಹೌದು ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡಿದ ಬಳಿಕ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಆರೋಗ್ಯವು ಲವಲವಿಕೆಯಿಂದ ಕೂಡಿರುತ್ತದೆ, ಅಲ್ಲದೇ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಕೂಡ ದೂರ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಬಾದಾಮಿ ಹಾಲು

ಹಸುವಿನ ಹಾಲನ್ನು ಭೂಲೋಕದ ಅಮೃತವೆಂದೇ ಪರಿಗಣಿಸಲಾಗಿದೆ. ಅದರಲ್ಲೂ ಈ ಹಾಲಿಗೆ ಸ್ವಲ್ಪ ಬಾದಾಮಿ ಬೀಜಗಳ ಪೌಡರ್‌ನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ, ಹಲವಾರು ಆರೋಗ್ಯಕಾರಿ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಸಿಕ್ಕಂತಾಗುತ್ತದೆ. ಇನ್ನು ವ್ಯಾಯಾಮ ಮಾಡಿದ ಬಳಿಕ, ಒಂದು ಲೋಟ ಬಾದಾಮಿ ಹಾಲನ್ನು ಕುಡಿಯುವುದರಿಂದ, ಬಳಲಿದ ನಮ್ಮ ದೇಹಕ್ಕೆ ನೈಸರ್ಗಿಕ ಶಕ್ತಿ ಸಿಕ್ಕಂತಾಗುತ್ತದೆ. ಅಷ್ಟೇ ಅಲ್ಲದೇ ಆರೋಗ್ಯವು ಅತ್ಯುತ್ತಮ ಗೊಂಡು ಬೇರೆ ಉಳಿದಂತಹ ಎಲ್ಲಾ ಅಂಗಾಂಗಗಳು ಸರಿಯಾಗಿ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗುತ್ತವೆ. ಹಾಗಾಗಿ ಇನ್ನು ಮುಂದೆ ವ್ಯಾಯಾಮ, ವಾಕಿಂಗ್ ಅಥವಾ ಜಾಗಿಂಗ್ ಮಾಡಿದ ಬಳಿಕ ಬಾದಾಮಿ ಹಾಲು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಹಿಂದಿನ ಲೇಖನಕುಂಬಾರಕೊಪ್ಪಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಚಿತ ಔಷಧಿ ಪೂರೈಕೆ
ಮುಂದಿನ ಲೇಖನಎಸಿಬಿ ರದ್ದು: ಕೋರ್ಟ್‌ ಆದೇಶ ನೋಡಿದ ಬಳಿಕ ಪ್ರತಿಕ್ರಿಯಿಸುವೆ ಸಿದ್ದರಾಮಯ್ಯ