ಮನೆ ಅಪರಾಧ ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ವಿದೇಶಿ ಪ್ರಜೆ ಬಂಧನ

ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ವಿದೇಶಿ ಪ್ರಜೆ ಬಂಧನ

0

ಬೆಂಗಳೂರು: ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ವಿದೇಶಿ ವ್ಯಕ್ತಿಯನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ‌.

ಮಾಲ್ಡೀವ್ಸ್ ಮೂಲದ ಅಕ್ರಂ ಅಹಮದ್ (51) ಬಂಧಿತ ಆರೋಪಿ.

33 ವರ್ಷದ ಗಗನಸಖಿ ನೀಡಿದ ದೂರಿನ ಅನ್ವಯ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ಧಾರೆ.

ಆಗಸ್ಟ್ 18ರಂದು ಮಾಲೆಯಿಂದ ಬೆಂಗಳೂರಿಗೆ ಬಂದಿದ್ದ ವಿಮಾನದಲ್ಲಿ ಪ್ರಯಾಣಿಸಿದ್ದ ಆರೋಪಿ, ಕ್ಯಾಬಿನ್ ಕ್ರೂ ಯುವತಿಯನ್ನ ಕರೆದು ಬಿಯರ್ ಹಾಗೂ ಗೋಡಂಬಿ ಕೇಳಿದ್ದ. ಸರ್ವ್ ಮಾಡುವ ಸಂದರ್ಭದಲ್ಲಿ 51 ವರ್ಷಗಳಿಂದಲೂ ನಿನ್ನಂತೆ ಇರುವ ಹುಡುಗಿಯನ್ನ ಹುಡುಕುತ್ತಿದ್ದೇನೆ. 10 ಡಾಲರ್ ಬದಲು 100 ಡಾಲರ್ ಕೊಡುತ್ತೇನೆ. ಉಳಿದ ಹಣ ನೀನೆ ಇಟ್ಟುಕೋ ಎಂದು ಆಕೆಯ ದೇಹವನ್ನ ಅಸಭ್ಯವಾಗಿ ಸ್ಪರ್ಶಿಸಿದ್ದ ಎಂದು ಆರೋಪಿಸಲಾಗಿದೆ.

ಮತ್ತೋರ್ವ ಮಹಿಳಾ ಸಿಬ್ಬಂದಿ ಹಣ ಕೇಳಲು ಹೋದಾಗ ಆರೋಪಿಯು ಹಣ ಹುಡುಕುವ ನೆಪದಲ್ಲಿ ತನ್ನ ಪ್ಯಾಂಟ್​​ ನೊಳಗೆ ಕೈ ಹಾಕಿಕೊಂಡು ಕೆಟ್ಟದಾಗಿ ವರ್ತಿಸಿದ್ದ ಎನ್ನಲಾಗಿದೆ. ವಿಮಾನ ಲ್ಯಾಂಡಿಂಗ್ ಸಂದರ್ಭದಲ್ಲಿಯೂ ಸಹ ಎರಡು ಮೂರು ಬಾರಿ ಆಸನದಿಂದ ಎದ್ದು ನಿಂತಿದ್ದು, ಕುಳಿತುಕೊಳ್ಳುವಂತೆ ಸೂಚಿಸಿದಾಗ ‘ನನಗೆ ಒರಟು ವಸ್ತುಗಳು ಇಷ್ಟ, ನೀನು ತುಂಬಾ ಒರಟು” ಎಂದು ಅಸಭ್ಯವಾಗಿ ವರ್ತಿಸಿದ್ದ ಎಂದು ನೊಂದ ಗಗನಸಖಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಲಾಗಿದೆ. ಬ್ಯುಸಿನೆಸ್ ವೀಸಾದಲ್ಲಿ ಆರೋಪಿ ಭಾರತಕ್ಕೆ ಬಂದಿದ್ದ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.