ಮನೆ ರಾಜಕೀಯ ಕರಾವಳಿಯಲ್ಲಿ ವಿಶೇಷ ಕಾರ್ಯಪಡೆ ರಚನೆ: ಉಡುಪಿ ಘನತೆಗೆ ಧಕ್ಕೆ ಎಂಬ ಪ್ರಶ್ನೆ ಇಲ್ಲ: ಗೃಹ ಸಚಿವ...

ಕರಾವಳಿಯಲ್ಲಿ ವಿಶೇಷ ಕಾರ್ಯಪಡೆ ರಚನೆ: ಉಡುಪಿ ಘನತೆಗೆ ಧಕ್ಕೆ ಎಂಬ ಪ್ರಶ್ನೆ ಇಲ್ಲ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ

0

ಉಡುಪಿ: ಕರಾವಳಿ ಪ್ರದೇಶಗಳಲ್ಲಿ ಇತ್ತೀಚೆಗೆ ನಡೆದ ಕೋಮು ಉದ್ರೇಕಕಾರಿ ಘಟನೆಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆಯನ್ನು ರಚಿಸಿದ್ದು, ಈ ನಿರ್ಧಾರ ಉಡುಪಿಗೆ ಅಪಮಾನ ಎಂಬ ಆಶಯವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿರಸ್ಕರಿಸಿದ್ದಾರೆ. “ಯಾವುದೇ ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶವೆಂದು ಬಿಂಬಿಸಲು ಈ ನಿರ್ಧಾರ ಕೈಗೊಳ್ಳಲಾಗಿಲ್ಲ. ಅಂಥ ಅಗತ್ಯವೇ ಬಾರದಿರಲಿ ಎಂಬುದೇ ನಮ್ಮ ಆಶಯ” ಎಂದು ಅವರು ಹೇಳಿದರು.

ಶಾಸಕ ಯಶ್‌ಪಾಲ್ ಸುವರ್ಣ ಅವರು ಉಡುಪಿಯನ್ನು ಕಾರ್ಯಪಡೆ ಭಾಗವನ್ನಾಗಿ ಮಾಡಿರುವುದನ್ನು ವಿರೋಧಿಸಿದ್ದರ ಬಗ್ಗೆ ಗೃಹ ಸಚಿವರು ಪ್ರತಿಕ್ರಿಯಿಸಿದರು. ಈ ಪಡೆಯ ಉಪಯೋಗ ಆಗದಿರುವಂತೆ ನೋಡಿಕೊಳ್ಳಿ ಅಂತ ಸಾರ್ವಜನಿಕರಿಗೂ ನಾನು ಮನವಿ ಮಾಡಿದ್ದೇನೆ. ಕೋಮುವಾದಕ್ಕೆ ಸಂಬಂಧಪಟ್ಟ ಘಟನೆ ನಡೆಯದಿದ್ದಲ್ಲಿ ಈ ಕಾರ್ಯಪಡೆ ಅಗತ್ಯ ಬರೋದಿಲ್ಲ. ಅಗತ್ಯ ಇದೆ ಇಲ್ಲ ಅನ್ನೋದನ್ನ ಸಾರ್ವಜನಿಕರೇ ನಿರ್ಧಾರ ಮಾಡಬೇಕು. ಇದರ ಅಗತ್ಯ ಬರದಿದ್ದಲ್ಲಿ ಕೋಮುವಾದ ಸಂಪೂರ್ಣ ಹೋಗಿದೆ ಅಂತ ಅರ್ಥ ಅಲ್ವ ಎಂದವರು ನಗುತ್ತಾ ಪ್ರಶ್ನಿಸಿದರು.

“ಘನತೆ ಎಂಬುದು ಪೊಲೀಸ್ ವ್ಯವಸ್ಥೆಯಿಂದ ಅಥವಾ ವಿಶೇಷ ಪಡೆಯಿಂದ ಕುಂದುಕೊಳ್ಳುವುದಿಲ್ಲ. ಕಾರ್ಕಳದಲ್ಲಿ ನಕ್ಸಲರು ಹತ್ಯೆ ನಡೆಸುತ್ತಿದ್ದ ಸಂದರ್ಭದಲ್ಲಿ ಎಎನ್‌ಎಫ್ ಕಚೇರಿಯನ್ನು ಅಲ್ಲಿ ಸ್ಥಾಪಿಸಿದ್ದೆವು. ಅಂದಿಂದ ಉಡುಪಿಯ ಘನತೆ ಏನೂ ಕುಸಿತವಾಗಿಲ್ಲ. ಹಾಗೆಯೇ ಈ ವಿಶೇಷ ಕಾರ್ಯಪಡೆಯೂ ಶಾಂತಿ ಕಾಪಾಡುವ ಉದ್ದೇಶದಿಂದಲೇ ರಚಿಸಲಾಗಿದೆ” ಎಂದು ಸಚಿವರು ಸ್ಪಷ್ಟಪಡಿಸಿದರು.

ಶುಕ್ರವಾರ ಸಂಜೆ ಕೊಲ್ಲೂರಿನಲ್ಲಿ ವಾಸ್ತವ್ಯ ಮಾಡಿದ್ದ ಡಾ.ಪರಮೇಶ್ವರ್ ಇಂದು ಬೆಳಗ್ಗೆ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಡಾ. ಪರಮೇಶ್ವರ್, ಈ ಭೇಟಿಯ ಬಗ್ಗೆ ಪ್ರಶ್ನೆ ಕೇಳಿದಾಗ “ಇದು ನನ್ನ ವೈಯಕ್ತಿಕ ಭೇಟಿ. ಇದು ಅಧಿಕೃತದ ಭಾಗವಲ್ಲ. ದೇವಾಲಯಕ್ಕೆ ಭೇಟಿ ನೀಡುವುದು ನಮ್ಮ ಸಂಸ್ಕೃತಿಯ ಭಾಗ. ತಾಯಿಗೆ ನಮಸ್ಕಾರ ಹಾಕಿದ್ದೇನೆ. ಇದನ್ನು ಪ್ರಶ್ನಿಸುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.