ಮನೆ ರಾಜಕೀಯ ರಾಜ್ಯದಲ್ಲಿ ಶಾಂತಿ ಭದ್ರತೆಗೆ ಅಪಾಯ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಒತ್ತಾಯ

ರಾಜ್ಯದಲ್ಲಿ ಶಾಂತಿ ಭದ್ರತೆಗೆ ಅಪಾಯ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಒತ್ತಾಯ

0

ಬೆಂಗಳೂರು: ರಾಜ್ಯವು ಹಿಜಾಬ್, ಕೇಸರಿ ಶಾಲು ಹಾಗೂ ಈಗ ಶಿವಮೊಗ್ಗದಲ್ಲಿ ಯುವಕನೊಬ್ಬನ ಕೊಲೆ ಕಾರಣದಿಂದ ರಾಜ್ಯದಲ್ಲಿ ಶಾಂತಿ ಭದ್ರತೆಗೆ ದೊಡ್ಡ ಅಪಾಯ ಎದುರಾಗಿದ್ದು, ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ವಿವಾದಗಳಿಂದ ಶಾಂತಿಯುತವಾಗಿದ್ದ ಇಡೀ ರಾಜ್ಯವೇ ಕುದಿಯುವ ಕುಲುಮೆಯಾಗಿದೆ. ಇಂಥ ಸೂಕ್ಷ್ಮ ಸಮಯದಲ್ಲಿ ರಾಜ್ಯಪಾಲರು ಮೌನವಾಗಿರುವುದು ಸರಿಯಲ್ಲ. ಅವರು ಯಾರ ಕೈಗೊಂಬೆಯೂ ಅಲ್ಲ, ಕೈಗೊಂಬೆ ಆಗಲೂ ಬಾರದು. ಹೀಗಾಗಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಸರಕಾರದಿಂದ ಮಾಹಿತಿ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಅಲ್ಲದೆ, ಶೀಘ್ರವೇ ತಾವು ಕೂಡ ಖುದ್ದು ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಹಾಗೂ ವಿಧಾನ ಮಂಡಲ ಕಲಾಪವನ್ನು ಸರಕಾರ ಸಮರ್ಪಕವಾಗಿ ನಡೆಸದ ಬಗ್ಗೆ ನಮ್ಮ ಪಕ್ಷದ ವತಿಯಿಂದ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರವೇ ರಾಜ್ಯ ಸರಕಾರವನ್ನು ವಜಾ ಮಾಡುವಂಥ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಠಿ ಆಗಿದೆ. ಬಿಜೆಪಿ ಪಕ್ಷದ ಲೋಕಸಭಾ ಸದಸ್ಯರೊಬ್ಬರೇ ಸರಕಾರದ ಅಸಮರ್ಥತೆ ನಮಗೆ ನಾಚಿಕೆ ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ. ಜನರು ಕೂಡ ರೋಸಿ ಹೋಗಿದ್ದಾರೆ. ಹೀಗಾಗಿ ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಲೇಬೇಕು ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು.

ರಾಜ್ಯದಲ್ಲಿ ಇಂಥ ಕೆಟ್ಟ ವಾತಾವರಣ ಉಂಟಾಗಲು ರಾಜ್ಯ ಸರಕಾರವೇ ಕಾರಣ. ಅವರ ಅಸಮರ್ಪಕ ಕಾರ್ಯ ವೈಖರಿಯಿಂದ ಇಡೀ ಶಿಕ್ಷಣ ಕ್ಷೇತ್ರ ಬಂದ್ ಮಾಡಿ‌ ಕೂರಿಸಿದ್ದಾರೆ. ಶಾಲೆ ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿ ಆಗಿದೆ. ಇನ್ನು ಹೈಕೋರ್ಟ್ ಅಂತೂ ಬಿಬಿಎಂಪಿಗೆ ನಿತ್ಯವೂ ಛೀಮಾರಿ ಹಾಕುತ್ತಿದೆ. ಅಧಿಕಾರಿಗಳನ್ನು ಜೈಲಿಗೆ ಕಳಿಸುವ ಎಚ್ಚರಿಕೆಯನ್ನು ನೀಡಿದೆ. ನಿಮ್ಮನ್ನು ಜೈಲಿಗೆ ಹಾಕಬೇಕಿತ್ತು. ಆದರೂ ಔದಾರ್ಯ ತೋರಿಸಿದ್ದೇವೆ ಎಂದು ನ್ಯಾಯಮೂರ್ತಿಗಳೇ ಎಚ್ಚರಿಕೆ ನೀಡುತ್ತಿದ್ದಾರೆ. ಈ ಸರಕಾರಕ್ಕೆ ಜನರ ಬಗ್ಗೆ ಬದ್ಧತೆ ಇದೆಯಾ? ಬಹಳ ನೊಂದು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.