ಕಲಬುರಗಿ: ಏ. 14 ರಂದು ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಮಾಜಿ ಶಾಸಕರ ಹಾಗೂ ಮುಖಂಡರ ದಂಡೇ ದೊಡ್ಡ ಮಟ್ಟದಲ್ಲಿ ಸೇರ್ಪಡೆಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಭಾಗದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ- ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿದ್ದಾರೆ. ಸೇರ್ಪಡೆ ಭರಾಟೆ ನೋಡಿದರೆ ಉತ್ತರ ಕರ್ನಾಟಕದಿಂದಲೇ 40ಕ್ಕೂ ಅಧಿಕ ಸ್ಥಾನಗಳು ಪಕ್ಷಕ್ಕೆ ಬರಲಿವೆ. ಹೀಗಾಗಿ ಸರಳವಾಗಿ 123 ಸ್ಥಾನಗಳು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಏನಿಸುತ್ತಿದೆ ಎಂದು ಹೇಳಿದರು.
ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಖ ಸೇರಿದಂತೆ ಹಲವರು ಸೇರುತ್ತಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸೇರ್ಪಡೆ ಸಮಾವೇಶ ನಡೆಯಲಿದೆ. ಜೆಡಿಎಸ್ ಮುಳುಗಿತು ಎನ್ನುವವರಿಗೆ ಮುಖ ಹೊಡೆದಂತೆ ನೂಕು ನುಗ್ಗಲು ಎನ್ನುವಂತೆ ಸೇರ್ಪಡೆಯಾಗುತ್ತಿದ್ದಾರೆ ಎಂದು ವಿವರಣೆ ನೀಡಿದರು.
ಪಕ್ಷದ ಅಂತಿಮ ಪಟ್ಟಿಯನ್ನು ಸಹ ಏ. 14 ರ ಸಂಜೆಯೇ ಬಿಡುಗಡೆಗೊಳಿಸಲಾಗುವುದು. ಪಕ್ಷಕ್ಕೆ ಸೇರ್ಪಡೆಯಾದವರ ಹೆಸರುಗಳನ್ನು ಸೇರಿಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಸೇರ್ಪಡೆ ವಿಷಯ ಎಚ್.ಡಿ.ದೇವೇಗೌಡರಿಗೆ ಬಿಟ್ಟದ್ದು, ಶಾಸಕರಾಗಿದ್ದಾಗಲೂ ತಮ್ಮ ಜತೆ ಸಂಪರ್ಕದಲ್ಲಿರಲಿಲ್ಲ. ಜನತಾ ಪರಿವಾರ ಬಿಟ್ಟು ಹೋದವರೆಲ್ಲ ಮರಳಿ ಜೆಡಿಎಸ್’ಗೆ ಬರುತ್ತಿದ್ದಾರೆ ಎಂದರು.