ಮೈಸೂರು(Mysuru): ತಾಲೂಕು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕಡಕೋಳ ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ಎಣ್ಣೆಹೊಳೆ ಸೇತುವೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿದ್ದು, ಸೇತುವೆಯನ್ನು ಐದರಿಂದ ಎಂಟು ಅಡಿಗಳಷ್ಟು ಎತ್ತರ ಮಾಡಬೇಕು ಎಂದು ಶಾಸಕರಾದ ಜಿ.ಟಿ.ದೇವೇಗೌಡ ಅವರಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಕಂಠ ತೊಂಡೆ ಗೌಡರು ಒತ್ತಾಯಿಸಿದರು.
ಮಳೆಯಿಂದಾಗಿ ಜಲಾವೃತಗೊಂಡಿರುವ ರಸ್ತೆ ಸೇತುವೆಯನ್ನುಇಂದು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ದಡದಹಳ್ಳಿ ಕಟ್ಟೆ ತುಂಬಿ ಹರಿಯುತ್ತಿರುವುದರಿಂದ ಗ್ರಾಮದಿಂದ ಮೈಸೂರು, ನಂಜನಗೂಡು, ಊಟಿ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಎಣ್ಣೆಹೊಳೆ ಸೇತುವೆ ಮುಳುಗಡೆಯಾಗಿದ್ದು, ಇದರಿಂದ ತುಂಬಾ ತೊಂದರೆಯಾಗಿದೆ.
ಕ್ಷೇತ್ರ ಶಾಸಕರಾದ ಜಿ.ಟಿ.ದೇವೇಗೌಡರು ಸ್ಥಳ ಪರಿಶೀಲಿಸಿ ಈ ರಸ್ತೆಯ ಸೇತುವೆಯನ್ನು ಎತ್ತರ ಮಾಡಿದರೆ, ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ. ಆದಷ್ಟು ಬೇಗನೆ ಶಾಸಕರು ಈ ಬಗ್ಗೆ ಗಮನಹರಿಸಬೇಕೆಂದು ಶ್ರೀಕಂಠ ತೊಂಡೆಗೌಡ ಒತ್ತಾಯಿಸಿದ್ದಾರೆ.