ತುಮಕೂರು: ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಚಿನ್ನ ಖರೀದಿಸಿ, ಬೆಲೆ ಹೆಚ್ಚಾದಾಗ ಮಾರಾಟ ಮಾಡಿ ದುಪ್ಪಟ್ಟು ಲಾಭ ಕೊಡುವುದಾಗಿ ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದ ಆಕಾಶ್ ಜ್ಯುವೆಲರ್ಸ್ ಮಾಲೀಕ ಶಿವಾನಂದಮೂರ್ತಿ, ಪತ್ನಿ ಅನ್ನಪೂರ್ಣ ಅವರನ್ನು ನಗರ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ನಗರಕ್ಕೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಸಿದ್ಧಲಿಂಗಪ್ಪ ಎಂಬುವರು ನೀಡಿದ ದೂರಿನ ಮೇರೆಗೆ ಶಿವಾನಂದಮೂರ್ತಿ, ಅನ್ನಪೂರ್ಣ, ಪುತ್ರ ಆಕಾಶ್ ಮತ್ತು ಇತರರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಹಣ ಹೂಡಿಕೆ ಅಥವಾ ಠೇವಣಿ ಇರಿಸಿದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದಾಗ ಚಿನ್ನ ಖರೀದಿಸಿ ದರ ಹೆಚ್ಚಾದಾಗ ಮಾರಾಟ ಮಾಡಿ ಅಧಿಕ ಲಾಭ ನೀಡುವುದಾಗಿ ನಂಬಿಸಿದ್ದರು. ಹಣಕ್ಕೆ ಪ್ರತಿಯಾಗಿ ಆಕಾಶ್ ಜ್ಯುವೆಲರ್ಸ್‌ಗೆ ಸಂಬಂಧಿಸಿದ ಠೇವಣಿ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದರು. ಇದನ್ನು ನಂಬಿ ಹಣ ಹೂಡಿಕೆ ಮಾಡಿದೆ ಎಂದು ಸಿದ್ಧಲಿಂಗಪ್ಪ ದೂರಿನಲ್ಲಿ ಉಲ್ಲೇಖಿಸಿದ್ದರು.
18 ಕೋಟಿ ವಂಚನೆ: ಆಕಾಶ್ ಜ್ಯುವೆಲರ್ಸ್ ಮಾಲೀಕರ ವಿರುದ್ಧ ಜ.29ರಿಂದ ಫೆ.2ರ ವರೆಗೆ ನಗರ ಠಾಣೆಯಲ್ಲಿ 56 ದೂರು ಸಲ್ಲಿಕೆಯಾಗಿವೆ. ಮೊದಲ ದಿನ 50 ಕ್ಕೂ ಹೆಚ್ಚು ಜನ ಠಾಣೆಯ ಮೆಟ್ಟಿಲು ಹತ್ತಿದ್ದರು. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾನುವಾರವೂ ಹಲವರು ದೂರು ಸಲ್ಲಿಸಿದ್ದಾರೆ. ಸುಮಾರು ₹18 ಕೋಟಿ ವಂಚಿಸಿರುವುದು ಇದುವರೆಗೆ ಸಲ್ಲಿಕೆಯಾದ ದೂರುಗಳಿಂದ ಗೊತ್ತಾಗಿದೆ.
ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪೊಲೀಸ್ ವಶಕ್ಕೆ ಪಡೆದು ತನಿಖೆ ನಡೆಸಲಾಗುವುದು. ಜನರಿಂದ ಪಡೆದ ಹಣ ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಎಂಬುವುದು ತನಿಖೆಯ ನಂತರವೇ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.















