ಬೆಂಗಳೂರು: ಆನ್’ಲೈನ್ ಪಾರ್ಟ್ ಟೈಮ್ ಜಾಬ್ ಕೊಡಿಸುವುದಾಗಿ ಹೇಳಿ ಮೋಸ ಮಾಡಲಾಗಿರುವ ನಾಲ್ಕು ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ ದಾಖಲಾಗಿವೆ.
ಏಪ್ರಿಲ್ 14ರ ಶುಕ್ರವಾರ ನಾಲ್ವರು ನಗರದ ಸೈಬರ್ ಕ್ರೈಂ ಪೊಲೀಸರಿಗೆ ಆನ್’ಲೈನ್’ನಲ್ಲಿ ಪಾರ್ಟ್ ಟೈಮ್ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಆಮಿಷ ಒಡ್ಡಿ ಹಣ ಪಡೆದು ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಇಂತಹ ಸೈಬರ್ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ವಿದ್ಯಾವಂತರೇ ಹೆಚ್ಚು ಬಲೆಗೆ ಬೀಳುತ್ತಿದ್ದಾರೆ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದರು.
ಟೆಲಿಗ್ರಾಂ ಖಾತೆಯಿಂದ ಪಾರ್ಟ್ ಟೈಮ್ ಜಾಬ್ ಬಗ್ಗೆ ಒಂದು ಸಂದೇಶ ಬಂದಿದ್ದು, ಅದರಂತೆ ದೂರುದಾರರು ಮಾಹಿತಿ ವಿಚಾರಿಸಿದ್ದಾರೆ. ಇದಕ್ಕೆ ಆರೋಪಿ ಆನ್ ಲೈನ್ ಮೂವಿ ಟಿಕೆಟ್ ರೇಟಿಂಗ್ ಉದ್ಯೋಗ ಎಂದು ನಂಬಿಸಿ, ಆ್ಯಪ್ ವೊಂದನ್ನು ಇನ್ ಸ್ಟಾಲ್ ಮಾಡಿ ಅದರಲ್ಲಿ ಖಾತೆ ತೆರೆದು ಅದರಲ್ಲಿ ಪ್ರಸಾರವಾಗುವ ವಿಡಿಯೋ ನೋಡಿ ರೇಟಿಂಗ್ ಹಾಕಿ ಕಮೀಷನ್ ಹಣ ಪಡೆದುಕೊಳ್ಳುವುದಾಗಿ ತಿಳಿಸಿದ್ದ. ಅದರಂತೆ ಮಾಡಿದಾಗ ದೂರುದಾರರಿಗೆ 1 ಸಾವಿರ ರೂ. ಕಮಿಷನ್ ನೀಡಿದ್ದಾರೆ.
ನಂತರ ಜಾಬ್ ಮುಂದುವರಿಸಲು 10,500 ರೂ. ಪಾವತಿಸುವಂತೆ ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿದ್ದು, ಅದರಂತೆ ದೂರುದಾರರು ಪಾವತಿಸಿದ್ದಾರೆ. ನಂತರ ಅದೇ ದಿನ ಹೆಚ್ಚಿನ ಕಮಿಷನ್ ಪಡೆಯಬೇಕಾದರೆ, 29,936ರೂ. ಪಾವತಿಸುವಂತೆ ತಿಳಿಸಿದ್ದಾರೆ. ಅದನ್ನೂ ನಂಬಿ ಖಾತೆಗೆ ಜಮಾ ಮಾಡಿದ್ದಾರೆ. ಹೀಗೆ ದೂರುದಾರರು ಹಂತ ಹಂತದಲ್ಲಿ ಒಟ್ಟು 1,14,901 ರೂ. ಪಾವತಿಸಿ ವಂಚನೆಗೊಳಗಾಗಿದ್ದಾರೆ.