ಮೈಸೂರು: ಹೋಂ ಪ್ರಾಡಕ್ಟ್ ಹಾಗೂ ಟ್ರಸ್ಟ್ ಹೆಸರಿನಲ್ಲಿ ಚಿನ್ನ, ಸೀರೆ, ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ನಜರಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಇಟ್ಟಿಗೆಗೂಡಿನ ನಿವಾಸಿ ಸಂಜಯ್ ಅಲಿಯಾಸ್ ಬದ್ರಿ(34) ಬಂಧಿತ ಆರೋಪಿ.
ಸತ್ಯಂ ಹೋಂ ಪ್ರಾಡಕ್ಟ್ ಹಾಗೂ ಪ್ರತಿಷ್ಟಾಪನಾ ಚಾರಿಟಬಲ್ ಟ್ರಸ್ಟ್ ಹೆಸರಿನಲ್ಲಿ ಕಡಿಮೆ ಹಣಕ್ಕೆ ಚಿನ್ನ, ಸೀರೆ, ಟಿವಿ, ದಿನಸಿ ಆಹಾರ ಪದಾರ್ಥಗಳನ್ನು ಕೊಡುತ್ತೇನೆಂದು ಹಲವರಿಂದ ಸುಮಾರು 30.33 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನಲೆ ನಜರ್ ಬಾದ್ ಠಾಣಾ ಪೊಲೀಸರು ಆರೋಪಿ ಸಂಜಯ್ ನನ್ನು ಬಂಧಿಸಿ, ನ್ಯಾಯಾಲಯದ ಅನುಮತಿ ಮೇರೆಗೆ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಆರಂಭದಲ್ಲಿ ವಂಚನೆಗೊಳಗಾದ ಒಬ್ಬರು ದೂರು ದಾಖಲಿಸಿದ್ದರು. ಆರೋಪಿಯ ಬಂಧನವಾದ ಬಳಿಕ ಹಲವರು ಸಂಜಯ್ ನಿಂದ ತಮಗೆ ವಂಚನೆಯಾಗಿದೆ ಎಂದು ಕರೆ ಮಾಡಿ ಮಾಹಿತಿ ಪಡೆದ ನಂತರ ಠಾಣೆಗೆ ಬಂದು ಹೇಳಿಕೆ ನೀಡುತ್ತಿದ್ದಾರೆ.
ಇದುವರೆಗೂ ಸುಮಾರು 30.33 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದಾನೆ ಎಂಬ ಮಾಹಿತಿ ಇದೆ. ಆತನಿಂದ ವಂಚನೆಗೊಳದವರ ಸಂಖ್ಯೆ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.