ಮನೆ ರಾಜಕೀಯ ಧರ್ಮದ ಅಫೀಮಿನ ನಶೆ  ದಾರಿ ತಪ್ಪಿಸುತ್ತಿದೆ: ವಿ.ಶ್ರೀನಿವಾಸ್ ಪ್ರಸಾದ್

ಧರ್ಮದ ಅಫೀಮಿನ ನಶೆ  ದಾರಿ ತಪ್ಪಿಸುತ್ತಿದೆ: ವಿ.ಶ್ರೀನಿವಾಸ್ ಪ್ರಸಾದ್

0

ಚಾಮರಾಜನಗರ: ‘ಧರ್ಮವನ್ನು ಮನುಷ್ಯನ ಒಳಿತಿಗೆ ಉಪಯೋಗಿಸಬೇಕು. ಆದರೆ, ನಮ್ಮಲ್ಲಿ ಧರ್ಮದ ವೈಭವೀಕರಣ ನಡೆಯುತ್ತಿದೆ. ಧರ್ಮದ ಅಫೀಮನ್ನು ನಾವು ತಿಂದಿದ್ದೇವೆ. ಅದು ನಶೆ ಏರಿ ಏನೇನೋ ಮಾಡಿಸುತ್ತಿದೆ. ದಾರಿ ತಪ್ಪಿಸುತ್ತಿದೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಹೇಳಿದರು.

ರಾಜ್ಯದಲ್ಲಿ ವರದಿಯಾಗುತ್ತಿರುವ ಕೋಮು ಸಂಘರ್ಷ ಪ್ರಕರಣಗಳ ಬಗ್ಗೆ ನಗರದಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ನಮ್ಮದು ಜಾತ್ಯತೀತ ರಾಷ್ಟ್ರ. ಎಲ್ಲ ಧರ್ಮಗಳನ್ನು ಅವುಗಳ ವಿಧಿ ವಿಧಾನಗಳನ್ನು ಗೌರವಿಸಬೇಕು. ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಘಟನೆಗಳನ್ನು ನೋಡಿದರೆ ವಿಷಾದವಾಗುತ್ತದೆ. ಇಂತಹದ್ದು ನಡೆಯಬಾರದು’ ಎಂದರು.

ಸಂಘರ್ಷವನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆಯೇ ಎಂದು ಕೇಳಿದ್ದಕ್ಕೆ, ‘ಅಲ್ಲಲ್ಲಿ ನಡೆದಿರುವ ಘಟನೆಗಳಿಗೂ ಸರ್ಕಾರಕ್ಕೂ ಸಂಬಂಧ ಇಲ್ಲ. ಸರ್ಕಾರ ತಕ್ಷಣವೇ ಘಟನೆಗಳನ್ನು ತಡೆಯಲು ಕಾರ್ಯೋನ್ಮುಖವಾಗಿದೆ. ಇಂತಹದ್ದಕ್ಕೆ ರಾಜ್ಯದಲ್ಲಿ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಉತ್ತರಿಸಿದರು.

ಮಣ್ಣಿಗೆ ಹೋಗುವುದರ ಒಳಗಾಗಿ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವುದಾಗಿ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್‌ ಅವರು, ‘ಮಾಡಲಿ ಸಂತೋಷ. ಮೊದಲು ಗೆದ್ದು ತೋರಿಸಲಿ. ಗೆದ್ದ ಮೇಲೆ ಅಲ್ಲವೇ ಮುಖ್ಯಮಂತ್ರಿಯ ಪ್ರಶ್ನೆ. ಜೆಡಿಎಸ್‌ನಲ್ಲಿ ಇರುವ ಮುಖಂಡರೆಲ್ಲಾ ಬಿಟ್ಟು ಹೋಗುತ್ತಿದ್ದಾರೆ. ಜಿ.ಟಿ.ದೇವೇಗೌಡ, ಗುಬ್ಬಿ ಶ್ರೀನಿವಾಸ್‌ ಮೊದಲದಾವರು ಪಕ್ಷ ತೊರೆಯುತ್ತಿದ್ದಾರೆ. ಎಲ್ಲವೂ ಜನರಿಗೆ ಗೊತ್ತಿದೆ. ಅವರು ತೀರ್ಮಾನ ಮಾಡುತ್ತಾರೆ. ಆ ಬಗ್ಗೆ ಮಾತನಾಡಲು ನಾವ್ಯಾರು? ಸಿ.ಎಂ.ಇಬ್ರಾಹಿಂ ಅವರು ರಾಜ್ಯಾಧ್ಯಕ್ಷರಾಗಿ ನೇಮಕವಾದ ತಕ್ಷಣ ಎಲ್ಲವೂ ಆಗಿ ಬಿಡುತ್ತದೆಯೇ’ ಎಂದು ವ್ಯಂಗ್ಯವಾಡಿದರು.

ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ಸಲಹೆ ನೀಡಲು ಹೋಗುವುದಿಲ್ಲ, ಅವರು ಕೇಳುವುದೂ ಇಲ್ಲ. ಆದರೆ, ಮೈಸೂರು ಭಾಗಕ್ಕೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ, ಖಂಡಿತ ಮೈಸೂರು ಭಾಗದವರು ಸಚಿವರಾಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿನ ಲೇಖನಹುಬ್ಬಳ್ಳಿ ಗಲಬೆ ಪ್ರಕರಣ: ಏ. 30ರವರೆಗೆ ನ್ಯಾಯಾಂಗ ಬಂಧನ
ಮುಂದಿನ ಲೇಖನಬಿಜೆಪಿಯವರು ಇಲ್ಲಿವರೆಗೆ ಕಡ್ಲೆಪುರಿ ತಿನ್ನುತ್ತಿದ್ರಾ..? ಮಾಜಿ ಸಿಎಂ ಸಿದ್ಧರಾಮಯ್ಯ