ನವದೆಹಲಿ(Newdelhi) : ಬಾಳಸಂಗಾತಿಯ ಆಯ್ಕೆ ಸ್ವಾತಂತ್ರವು ವೈಯಕ್ತಿಕ ಸ್ವಾತಂತ್ರ್ಯದ ಮೂಲಸಾರ. ಈ ವಿಷಯದಲ್ಲಿ ನಂಬಿಕೆಯ ಪ್ರಶ್ನೆಯು ಅಡ್ಡಿಯಾಗಬಾರದು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸಂಗಾತಿ ಆಯ್ಕೆಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯರು ಸೇರಿದಂತೆ ಕೆಲವರಿಂದ ದಂಪತಿಗೆ ರಕ್ಷಣೆ ನೀಡುವಂತಹ ಸೂಕ್ಷ್ಮ ವಿಷಯದಲ್ಲಿ ಪೊಲೀಸರು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪತ್ನಿಯ ಕುಟುಂಬದ ಸದಸ್ಯರು ನಮ್ಮನ್ನು ಅಪಹರಿಸಿದ್ದು, ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಕತ್ತಿಯಿಂದ ನನ್ನ ಗುಪ್ತಾಂಗಕ್ಕೆ ಹಾನಿ ಮಾಡಿದ್ದಾರೆ. ಹಲ್ಲೆಯಿಂದ ಇರಿತದ ಗಾಯಗಳಾಗಿವೆ ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ಈ ರೀತಿ ಹೇಳಿದೆ.
ದಂಪತಿಯ ಸುರಕ್ಷತೆಗೆ ಒತ್ತು ನೀಡಲು ಹಾಗೂ ಭದ್ರತೆ ನೀಡುವಲ್ಲಿ ಪೊಲೀಸರು ಸೂಕ್ತವಾದ ಕ್ರಮಕೈಗೊಂಡಿಲ್ಲ ಎಂಬುದು ದುರದೃಷ್ಟಕರ. ಪೊಲೀಸರಿಂದ ಇಂಥ ಲೋಪವನ್ನು ಸಹಿಸಲಾಗದು. ಕರ್ತವ್ಯಲೋಪ ತೋರಿದವರ ವಿರುದ್ಧ ಕ್ರಮವಹಿಸಬೇಕು ಎಂದು ಕೋರ್ಟ್ ಹೇಳಿದೆ.
ಇಂಥ ಪ್ರಕರಣಗಳಲ್ಲಿ ದೂರುಗಳು ಬಂದಾಗ ಪೊಲೀಸರು, ಸಂಬಂಧಿಸಿದ ಅಧಿಕಾರಿಗಳು ಹೆಚ್ಚು ಸೂಕ್ಷ್ಮತೆ ವಹಿಸುವಂತೆ ಸಿಬ್ಬಂದಿಯನ್ನು ಸಜ್ಜುಗೊಳಿಸಬೇಕು ಎಂದೂ ಕೋರ್ಟ್, ದೆಹಲಿ ಪೊಲೀಸ್ ಕಮಿಷನರ್ ಅವರಿಗೆ ಸಲಹೆ ಮಾಡಿತು.