ಮನೆ ಸಾಹಿತ್ಯ ಸಾಮಾನ್ಯದಿಂದ ನಿರ್ಧಿಷ್ಟತೆಯತ್ತ

ಸಾಮಾನ್ಯದಿಂದ ನಿರ್ಧಿಷ್ಟತೆಯತ್ತ

0

ವ್ಯಕ್ತಿತ್ವದ ವಿಕಾಸಕ್ಕೆ ಒಂದು ವಿಧಾನವಿದೆ. ಅದು ಸಾಮಾನ್ಯದಿಂದ ನಿರ್ದಿಷ್ಟತೆಯ ಕಡೆಗೆ ಚಲಿಸುತ್ತಿರುತ್ತದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬಹುದೆಂದರೆ, ಒಬ್ಬ ವ್ಯಕ್ತಿಯನ್ನು ಅಭ್ಯಸಿಸಬೇಕು.

Join Our Whatsapp Group

ಪುಟ್ಟ ಮಕ್ಕಳನ್ನು ನೋಡಿ, ಅವರು ಎಲ್ಲದರ ಬಗ್ಗೆಯೂ ಪ್ರಶ್ನಿಸುತ್ತಾರೆ. ಆಕಾಶ ಯಾಕೆ ಮೇಲೆ ಇದೆ? ಭೂಮಿಯ ಕೆಳಗೆ ಏನಿದೆ? ನಾನು ಹುಟ್ಟುವ ಮೊದಲು ಎಲ್ಲಿದ್ದೆ? ಹೀಗೆ ಪುಟ್ಟ ಮಕ್ಕಳು ಉತ್ತರಿಸಲು ಆಗದೆ ಇರುವಂತಹ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ಪ್ರಶ್ನೆಗಳು ಯಾವ ಕ್ಷೇತ್ರಕ್ಕೆ ಸಂಬಂಧಿಸಿವೆ ಎನ್ನುವುದು ಕೂಡ ಅರ್ಥ ಆಗುವುದಿಲ್ಲ. ಎಲ್ಲವನ್ನೂ ಹೀರಿಕೊಳ್ಳುವ ಕ್ರಮ ಅದು. ಅದೇ ಮಕ್ಕಳು 5-6ನೆಯ ತರಗತಿಗೆ ಬಂದಾಗ ಆಟಗಳ ಬಗ್ಗೆ ಕೇಳುತ್ತಾರೆ. ಗಣಿತದ ಬಗ್ಗೆ ಕೇಳುತ್ತಾರೆ. ವಿಜ್ಞಾನದ ಬಗ್ಗೆ ಕೇಳುತ್ತಾರೆ. ಅಂದರೆ ಎಲ್ಲವನ್ನೂ ಹೀರುವ ಪ್ರವೃತ್ತಿಯಿಂದ ಕೆಲವನ್ನು ಬಿಟ್ಟು ಕೆಲವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ಮಕ್ಕಳು 8-9ನೆಯ ತರಗತಿಗೆ ಬಂದಾಗ ಎಲ್ಲ ಆಟಗಳ ಬಗ್ಗೆ ಕೇಳುವುದನ್ನು ಬಿಟ್ಟುಕೊಟ್ಟು ಕ್ರಿಕೆಟ್ ಬಗ್ಗೆಯೋ, ಚೆಸ್ ಬಗ್ಗೆಯೋ ಮಾತ್ರವೇ ಹೆಚ್ಚು ವಿಚಾರ ಮಾಡಬಹುದು. ಸಮಾಜ ವಿಜ್ಞಾನ, ಗಣಿತಗಳನ್ನು ಅಭ್ಯಾಸಕ್ಕೆ ಬೇಕಾದಷ್ಟನ್ನೇ ತೆಗೆದುಕೊಂಡು ವಿಜ್ಞಾನದ ಬಗ್ಗೆ ಮಾತ್ರ ವಿಶೇಷವಾಗಿ ಯೋಚನೆಯನ್ನು ಮಾಡಬಹುದು.

        ವಿಜ್ಞಾನದ ಬಗ್ಗೆ ಯೋಚನೆ ಮಾಡುತ್ತಾ ಮಾಡುತ್ತಾ ಹೋದ ಹಾಗೆ ಮೊದಲು ಜೀವಶಾಸ್ತ್ರವನ್ನು ಕೈಬಿಟ್ಟು ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದ ಬಗ್ಗೆ ಮಾತ್ರ ಯೋಚನೆ ಮಾಡಲು ತೊಡಗಬಹುದು. ನಂತರ ರಸಾಯನ ಶಾಸ್ತ್ರವನ್ನು ಕೈಬಿಟ್ಟು ಭೌತಶಾಸ್ತ್ರವನ್ನು ಮಾತ್ರ ಆಯ್ದುಕೊಳ್ಳಬಹುದು. ಆ ಮೇಲೆ ಭೌತಶಾಸ್ತ್ರದಲ್ಲಿ ಬಾಹ್ಯಾಕಾಶ ಅಭ್ಯಾಸವನ್ನು, ಅದರ ನಂತರ ರಾಕೆಟ್ ತಂತ್ರಜ್ಞಾನದ ಬಗ್ಗೆ ಮಾತ್ರ ಆಸಕ್ತಿಯನ್ನು ಹೆಚ್ಚಿಸಿಕೊಂಡು ಅದರಲ್ಲೇ ಅಭ್ಯಾಸವನ್ನು ಮುಂದುವರಿಸಿ ರಾಕೆಟ್ ವಿಜ್ಞಾನಿಯಾಗಿ ಸಾಧನೆಯನ್ನು ಮಾಡಬಹುದು. ಈ ಇಡೀ ಪ್ರಕ್ರಿಯೆಯಲ್ಲಿ ಸಾಮಾನ್ಯದಿಂದ ನಿರ್ದಿಷ್ಟತೆಯತ್ತ ಎಂಬ ತತ್ವವು ಅನ್ವಯವಾಗುತ್ತದೆ. ಆದ್ದರಿಂದ ಮೊದಲೆಲ್ಲ ಅವನು ಕ್ರಿಕೆಟ್, ಹಾಕಿ, ಫುಟ್‌ಬಾಲ್ ಎಲ್ಲ ಆಡುತ್ತಿದ್ದ; ಈಗ 24 ಗಂಟೆಯೂ ಫುಟ್‌ ಬಾಲ್ ಮಾತ್ರ ಆಟವಾಡುತ್ತಾನೆ ಎಂದು ಆಕ್ಷೇಪಿಸಬೇಕಾಗಿಲ್ಲ. ಸಾಮಾನ್ಯದಿಂದ ನಿರ್ದಿಷ್ಟತೆಯತ್ತ ಸಾಗುವ ಸಹಜ ವಿಕಾಸದ ತತ್ವ ಅದರಲ್ಲಿ ಅನ್ವಯವಾಗಿದೆ ಅಷ್ಟೆ.

       ಈ ಪ್ರಕ್ರಿಯೆಯಲ್ಲಿ ಏನಾಗಬೇಕು ಎಂದರೆ ಸಾಮಾನ್ಯಗಳನ್ನು ಕೈಬಿಡುತ್ತಾ ನಿರ್ದಿಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳುವಾಗ ಆಯ್ಕೆ ಮಾಡಿಕೊಂಡದ್ದರಲ್ಲಿ 58

ತೊಡಗಿಕೊಳ್ಳುವಿಕೆ ಜಾಸ್ತಿಯಾಗಬೇಕು. ಉಳಿದೆಲ್ಲದರ ಆಸಕ್ತಿಗೆ ವ್ಯವಾಗುತ್ತಿದ್ದ ಶಕ್ತಿಯನ್ನು ನಿರ್ದಿಷ್ಟವಾದ ಆಯ್ಕೆಯ ಮೇಲೆ ಉಪಯೋಗಿಸಲು ಸಾಧ್ಯವಾಗಬೇಕು. ಆಗ ಮಾತ್ರ ಅದರಲ್ಲಿ ಸಾಧನೆಯನ್ನು ಮಾಡಲು ಬರುತ್ತದೆ. ಇಲ್ಲಿ ಒಂದು ಎಚ್ಚರಿಕೆಯ ಅಗತ್ಯವಿದೆ. ಅದೇನೆಂದರೆ ಹಲವುಗಳ ಆಸಕ್ತಿಯನ್ನು ಕಳೆದುಕೊಂಡಾಗ ನಿರ್ದಿಷ್ಟವಾದುದರ ಬಗ್ಗೆ ಹೆಚ್ಚು ಆಸಕ್ತಿಯನ್ನು ತಳೆಯಬೇಕು. ಬದಲು ಎಲ್ಲ ಆಸಕ್ತಿಗಳನ್ನೂ ಕಳೆದುಕೊಳ್ಳಬಾರದು.