ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಬಿಜೆಪಿ ಖಾಸಗಿ ಸಂಸ್ಥೆಯವರು ನೀಡಿರುವ ಎಫ್ ಎಸ್ ಎಲ್ ವರದಿ ಬಿಡುಗಡೆ ಮಾಡಿದ್ದು, ಇದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಖಾಸಗಿ ಸಂಸ್ಥೆಯಿಂದ ಎಫ್ ಎಸ್ ಎಲ್ ವರದಿ ನೀಡಲು ಅವಕಾಶವಿಲ್ಲ.ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಾವು ಎಫ್ ಎಸ್ ಎಲ್ ವರದಿಗೆ ಕಾಯುತ್ತಿದ್ದೇವೆ ಎಂದರು.
ಸರ್ಕಾರದ ಎಫ್ ಎಸ್ ಎಲ್, ಗೃಹ ಇಲಾಖೆಯ ಫಾರೆನ್ಸಿಕ್ಸ್ ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ದೃಢವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.