ಬೈಲಹೊಂಗಲ(Byilahongala): ತಾಲ್ಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರ ಶಿವಯೋಗಿ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಅವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ಸಕಲ ವಿಧಿ, ವಿಧಾನಗಳೊಂದಿಗೆ ಮಂಗಳವಾರ ಮಧ್ಯಾಹ್ನ ಮಠದ ಆವರಣದಲ್ಲಿ ನೆರವೇರಿತು.
ಸೋಮವಾರ ರಾತ್ರಿಯಿಂದ ಅಪಾರ ಸಂಖ್ಯೆಯ ಭಕ್ತರು ಮಠದ ಆವರಣದಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಾರ್ಥಿವ ಶರೀರದ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಕಿಕ್ಕಿದು ಸೇರಿದ್ದ ಭಕ್ತರು, ಗ್ರಾಮಸ್ಥರು ಕೈ ಮುಗಿದು, ಹೂವು ಮಾಲೆ ಅರ್ಪಿಸಿದರು.
ಮರಳಿ ಮಠಕ್ಕೆ ಬಂದ ನಂತರ, ಆವರಣದಲ್ಲೇ ತೋಡಿದ ಕುಣಿಯಲ್ಲಿ ಶ್ರೀಗಳನ್ನು ಮಣ್ಣು ಮಾಡಲಾಯಿತು. ಈ ಸಂದರ್ಭ ಹಲವು ಪೂಜ್ಯರು ವಚನ ಪಠಣ ಮಾಡಿದರು.
ಗದಗ ಡಂಬಳದ ಡಾ.ಸಿದ್ಧರಾಮ ಸ್ವಾಮೀಜಿ, ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ, ಯಕ್ಕುಂಡಿ ಪಂಚಾಕ್ಷರ ಸ್ವಾಮೀಜಿ, ಉಳವಿ ಬಸವಪೀಠದ ಬಸವಪ್ರಕಾಶ ಸ್ವಾಮೀಜಿ, ಶಿವಮೊಗ್ಗ, ದಾವಣಗೆರೆ ಬಸವಪ್ರಭು ಸ್ವಾಮೀಜಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಪೂಜ್ಯರು, ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಡಿ.ಬಿ.ಇನಾಮದಾರ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಸೇರಿದಂತೆ ಅನೇಕರು ಇದ್ದರು.
ಮುಖಂಡರಾದ ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ಲಿಂಗಾಯತ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ, ವಿಕ್ರಂ ಇನಾಮದಾರ, ಶಿವು ಮೆಟ್ಯಾಲ ಸೇರಿದಂತೆ, ಹಿರಿಯರು, ಬಸವ ಸೇನೆ ಮುಖ್ಯಸ್ಥರು ಪೂಜ್ಯರ ಅಂತ್ಯಕ್ರಿಯೆ ವಿಧಿ, ವಿಧಾನಗಳನ್ನು ನೆರವೇರಿಸಲು ಶ್ರಮಿಸಿದರು.