ಮನೆ ಸುದ್ದಿ ಜಾಲ ಹಿರಿಯ ಕವಿ ಚನ್ನವೀರ ಕಣವಿ ನಿಧನಕ್ಕೆ ಗಣ್ಯರ ಸಂತಾಪ

ಹಿರಿಯ ಕವಿ ಚನ್ನವೀರ ಕಣವಿ ನಿಧನಕ್ಕೆ ಗಣ್ಯರ ಸಂತಾಪ

0

ಬೆಂಗಳೂರು: ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಹಾನಿಯಾಗಿದೆ. ಧೀಮಂತ ಮಾರ್ಗದರ್ಶಕ ಇಲ್ಲದಂತಾಗಿದೆ. ಸಾತ್ವಿಕ ಚಿಂತಕರ ಕೊರತೆ ಇರುವ ಈ ಸಂದರ್ಭದಲ್ಲಿ ಚೆನ್ನವೀರ ಕಣವಿ ಅವರ ಪ್ರಸ್ತುತತೆ ತಂಬಾ ಅವಶ್ಯಕವಾಗಿತ್ತು. ಈ ಸಂದರ್ಭದಲ್ಲಿ ಅವರನ್ನು ಕಳೆದುಕೊಂಡ ಕನ್ನಡ ನಾಡು ನಷ್ಟದಲ್ಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದರು.

‘ಚೆಂಬೆಳಕಿನ ಕವಿ’ ಖ್ಯಾತಿಯ ಡಾ. ಚೆನ್ನವೀರ ಕಣವಿ ಅವರು ನಿಧನದ ಹಿನ್ನೆಲೆಯಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ‘ಕಳೆದ ನಾಲ್ಕು ದಶಕಗಳಿಂದ ಆತ್ಮೀಯರಾಗಿದ್ದ ಕವಿ, ನಾಡೋಜ ಚೆನ್ನವೀರ ಕಣವಿ ಅವರು ಸಜ್ಜನಿಕೆಯ ಸಾಕಾರಮೂರ್ತಿ. ಅವರ ಮಾತುಗಳು ಅತ್ಯಂತ ಮಾನವೀಯತೆ ಮತ್ತು ಮನಮುಟ್ಟುವಂತವು. ತಮ್ಮ ಮೃದು ಮಾತುಗಳಿಂದ ಎಲ್ಲರ ಮನಸ್ಸನ್ನು ಗೆಲ್ಲುವಂತಹ ಅಪರೂಪದ ವ್ಯಕ್ತಿತ್ವ ಹೊಂದಿದ್ದರು’ ಎಂದರು.

ಸಾಹಿತ್ಯದ ಲೋಕದಲ್ಲಿ ಒಬ್ಬೊಬ್ಬರನ್ನೇ ಕಳೆದುಕೊಳ್ಳುತ್ತಿದ್ದೇವೆ. ಸಿದ್ದಲಿಂಗಯ್ಯ ಅವರನ್ನು ಕಳೆದುಕೊಂಡೆವು. ಚಂಪಾ ಅವರನ್ನು ಕಳೆದುಕೊಂಡೆವು. ಇವತ್ತು ಕಣವಿ ಅವರನ್ನು ಕಳೆದುಕೊಂಡಿದ್ದೇವೆ. ಕಳೆದುಕೊಂಡಿರುವ ಮಹನೀಯರ ಸ್ಮರಣೆ ಮತ್ತು ಪ್ರೇರಣೆ ಪಡೆದುಕೊಂಡು ಹೊಸ ಸಾಹಿತಿಗಳು ಬರಬೇಕು. ಹೊಸ ಚಿಂತನೆಗಳು ಆಗಬೇಕು. ಮೇರು ಸ್ಥಾನಕ್ಕೆ ಏರಬೇಕು. ಸಾಹಿತ್ಯ ಲೋಕದ ಬೆಳವಣಿಗೆಗೆ ಅಗತ್ಯ ಸಹಾಯವನ್ನು ಮಾಡಲು ಸರ್ಕಾರ ಸಿದ್ಧವಿದೆ. ಈ ಮೂಲಕವೇ ಕಣವಿ ಅವರಿಗೆ ನಿಜವಾದ ಗೌರವ ಮತ್ತು ಶ್ರದ್ಧಾಂಜಲಿ ಅರ್ಪಿಸಿದಂತಾಗುತ್ತದೆ ಎಂದರು.

‘ಕನ್ನಡ ಕಾವ್ಯಲೋಕದ ಚೆಂಬೆಳಕಾಗಿದ್ದ, ಸೌಹಾರ್ದತೆಯನ್ನು ಸಾರುತ್ತಾ ಸಮನ್ವಯ ಕವಿ ಎಂದೇ ಖ್ಯಾತರಾಗಿದ್ದ ಕವಿ ಚೆನ್ನವೀರ ಕಣವಿ ಅವರ ನಿಧನದಿಂದ ಅತೀವ ದು:ಖಕ್ಕೀಡಾಗಿದ್ದೇನೆ. ಅವರ ಕುಟುಂಬ ವರ್ಗದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ‌ ಕೋರುತ್ತೇನೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶೋಕ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಾಡೋಜ ಚನ್ನವೀರ ಕಣವಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿ ಕಳಚಿದಂತಾಗಿದೆ. ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ. ಅನೇಕ ಕವನಸಂಕಲನಗಳನ್ನು ರಚಿಸಿ, ಜನಸಾಮಾನ್ಯರಿಗೆ ಸರಳವಾಗಿ ಕಾವ್ಯದ ರುಚಿ ಉಣಬಡಿಸಿದ ಚೆಂಬೆಳಕಿನ ಕವಿಯಾಗಿದ್ದ ಚನ್ನವೀರ ಕಣವಿ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕಣವಿ ಅವರ ಪದ್ಯವನ್ನು ಟ್ವೀಟ್ ಮಾಡಿ ಸಂತಾಪ ಕೋರಿದ್ದಾರೆ.

ಹೂವು ಹೊರಳುವುವು ಸೂರ್ಯನ ಕಡೆಗೆ

ನಮ್ಮ ದಾರಿ ಬರಿ ಚಂದ್ರನವರೆಗೆ

ಇರುಳಿನ ಒಡಲಿಗೆ ದೂರದ ಕಡಲಿಗೆ

ಮುಳುಗಿದಂತೆ ದಿನ ಬೆಳಗಿದಂತೆ

ಹೊರ ಬರುವನು ಕೂಸಿನ ಹಾಗೆ//

ಇಂಥ ಅನನ್ಯ ಕಾವ್ಯ ರಚಿಸಿದ ಅವರು ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಕುಟುಂಬದವರು, ನಾಡಿನ ಜನರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೇ ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್ ರಾಜ್ ಸಚಿವ  ಕೆ ಎಸ್ ಈಶ್ವರಪ್ಪ, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಸಚಿವರಾದ ಗೋವಿಂದ ಕಾರಜೋಳ, ಡಾ.ನಾರಾಯಣ ಗೌಡ, ಬಿ.ಸಿ.ಪಾಟೀಲ್, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಸೇರಿದಂತೆ ಇತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹಿಂದಿನ ಲೇಖನಬಾಲಿವುಡ್ ನ ಹಿರಿಯ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನ
ಮುಂದಿನ ಲೇಖನಕೊರೋನಾ: ದೇಶದಲ್ಲಿಂದು 30,615 ಹೊಸ ಕೇಸ್ ಪತ್ತೆ