ಪಿಆರ್‌ಕೆ ಪ್ರೊಡಕ್ಷನ್ಸ್’ನಡಿ, ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಅವರ ಜೊತೆಗೂಡಿ ನಟ ದಿವಂಗತ ಪುನೀತ್ ರಾಜ್‌ಕುಮಾರ್ ತಯಾರಿಸಿದ್ದ ಡಾಕ್ಯೂಫಿಲಂ ‘ಗಂಧದಗುಡಿ’ ಕುರಿತು ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನಿ ಪುನೀತ್ ರಾಜ್’ಕುಮಾರ್ ಈ ಪ್ರೊಜೆಕ್ಟ್‌ನ ನೆನಪುಗಳ ಕುರಿತು ಮಾತನಾಡಿದ್ದಾರೆ.
ಚಿತ್ರದ ಬಿಡುಗಡೆ ಹೊಸ್ತಿಲಲ್ಲಿ ತಮ್ಮ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನಿ ಪುನೀತ್ ರಾಜ್’ಕುಮಾರ್ ಈ ಪ್ರೊಜೆಕ್ಟ್‌ನ ನೆನಪುಗಳ ಕುರಿತು ಮಾತನಾಡಿದ್ದಾರೆ.
ಇತ್ತೀಚೆಗೆ ನಡೆದಿದ್ದ, ‘ಪುನೀತಪರ್ವ’ ಪ್ರಿರಿಲೀಸ್ ಕಾರ್ಯಕ್ರಮದ ಯಶಸ್ಸಿನಿಂದಲೇ ಮಾತು ಆರಂಭಿಸಿದ ಅಶ್ವಿನಿ ಅವರು, ಪುನೀತಪರ್ವ ಮಾಡಿದ್ದೇ ಅಭಿಮಾನಿಗಳಿಗಾಗಿ. ಒಂದು ಲಕ್ಷಕ್ಕೂ ಅಧಿಕ ಜನರು ಇಲ್ಲಿ ಭಾಗವಹಿಸಿದ್ದು ತೃಪ್ತಿ ನೀಡಿತು. ಕನ್ನಡ ಚಿತ್ರರಂಗ ಹಾಗೂ ದಕ್ಷಿಣ ಭಾರತದ ಚಿತ್ರರಂಗದ ಕಲಾವಿದರೂ ಪಾಲ್ಗೊಂಡಿದ್ದು ಸಂತೋಷ ನೀಡಿತು. ಅಭಿಮಾನಿಗಳಿಗೆ ನಮ್ಮ ಇಡೀ ಕುಟುಂಬ ಚಿರಋಣಿಯಾಗಿರಲಿದೆ ಎಂದರು.
ಗಂಧದಗುಡಿ ಅಪ್ಪಾಜಿ ಹಾಗೂ ಶಿವರಾಜ್‌ಕುಮಾರ್ ಅವರು ಮಾಡಿದ ಸಿನಿಮಾ. ಪುನೀತ್ ಹಾಗೂ ಅಮೋಘವರ್ಷ ಪರಸ್ಪರ ಚರ್ಚಿಸುತ್ತಿರುವಾಗ ಹೊಳೆದ ಶೀರ್ಷಿಕೆ ‘ಗಂಧದಗುಡಿ’. ಈ ಹೊಸ ‘ಗಂಧದಗುಡಿ’ ಪುನೀತ್ ಅವರ ಪಯಣ. ಇದನ್ನು ನೈಜವಾಗಿ ಸೆರೆಹಿಡಿಯಲಾಗಿದೆ ವಿನಃ ಚಿತ್ರೀಕರಿಸಿಲ್ಲ. ಅಪ್ಪು ಅವರ ಕಣ್ಣಿನ ಮೂಲಕ ಕರುನಾಡನ್ನು ನೋಡುತ್ತೇವೆ. ಪುನೀತ್ ಅವರ ಈ ಪಯಣ ನನಗೆ ಹೆಮ್ಮೆ ತಂದಿದೆ ಎಂದು ಭಾವುಕರಾದರು ಅಶ್ವಿನಿ.
ಗಂಧದಗುಡಿಯಲ್ಲಿ ಪುನೀತ್ ಅವರು ಪುನೀತ್ ಆಗಿಯೇ ಇದ್ದರು. ಮೇಕಪ್ ಇಲ್ಲದೆ, ಜನಜಂಗುಳಿ ಇಲ್ಲದೆ ಪ್ರತಿಯೊಂದು ದೃಶ್ಯದಲ್ಲೂ ಬಹಳ ಖುಷಿಯಿಂದ ಭಾಗವಹಿಸುತ್ತಿದ್ದರು. ನಾನು ಕಾಳಿ ನದಿ ತಟದಲ್ಲಿ ನಡೆದ ಚಿತ್ರೀಕರಣಕ್ಕೆ ಹೋಗಿದ್ದೆ. ನನ್ನ ಜೊತೆ ಮಾತನಾಡಲು ಒಂದು ಬೆಟ್ಟವನ್ನು ಹತ್ತಿ ಕರೆ ಮಾಡಿದ್ದರು ಪುನೀತ್. ‘ನೀನು ಬರಲೇಬೇಕು’ ಎಂದು ಹಠಹಿಡಿದಿದ್ದರು. ‘ನನ್ನ ಜೊತೆ ಟ್ರೆಕ್ಕಿಂಗ್ ಮಾಡು’ ಎಂದು ಒತ್ತಾಯಿಸಿದ್ದರು. ಹೀಗಾಗಿ ನಾನು ಬೆಂಗಳೂರಿನಿಂದ ಅಲ್ಲಿಗೆ ಹೋಗಿದ್ದೆ. ಇಡೀ ತಂಡದ ಜೊತೆ ಬೆಳಗ್ಗೆ 4 ಗಂಟೆಗೆ ಎದ್ದು ಟ್ರೆಕ್ಕಿಂಗ್ ಆರಂಭಿಸಿದ್ದೆ’ ಎಂದು ನೆನಪಿಸಿಕೊಂಡರು.
ನನಗೆ ಹೆಮ್ಮೆ ಕೊಟ್ಟಿರುವ ಪ್ರೊಜೆಕ್ಟ್ ಇದು. ಒಂದೆಡೆ ಬೇಸರ, ಮತ್ತೊಂದೆಡೆ ಖುಷಿ. ಒಮ್ಮೆ ಹಿಂದಿರುಗಿ ನೋಡಿದರೆ ಗಂಧದಗುಡಿಗೆ ಪುನೀತ್ ಅವರೇ ಸೂಕ್ತ ರಾಯಭಾರಿ ಎಂದೆನಿಸುತ್ತಿದೆ. ಈ ಡಾಕ್ಯೂಫಿಲಂ ನಿರ್ಮಾಣದ ನಿರ್ಧಾರ ತೆಗೆದುಕೊಂಡಿದ್ದಕ್ಕೂ ಬಹಳ ಸಂತೋಷವಿದೆ ಎಂದರು ಅಶ್ವಿನಿ.
ಡಾಕ್ಯೂಫಿಲಂ ‘ಗಂಧದಗುಡಿ’ ಅ.28ರಂದು ತೆರೆಕಾಣುತ್ತಿದೆ.