ಮನೆ ದೇವಸ್ಥಾನ ಹಲವು ವಿಶೇಷಗಳ ಗವಿ ಗಂಗಾಧರೇಶ್ವರ ದೇವಾಲಯ

ಹಲವು ವಿಶೇಷಗಳ ಗವಿ ಗಂಗಾಧರೇಶ್ವರ ದೇವಾಲಯ

0

ಭಾರತದಲ್ಲಿರುವ ಕೆಲವೇ ಕೆಲವು ಪ್ರಾಚೀನ ಗುಹಾಂತರ ದೇವಾಲಯಗಳಲ್ಲಿ ಬೆಂಗಳೂರು ಕೆಂಪೇಗೌಡನಗರ (ಗವಿಪುರಂ ಗುಟ್ಟಹಳ್ಳಿ) ದಲ್ಲಿರುವ ಶ್ರೀಗವಿಗಂಗಾಧರೇಶ್ವರ ಸ್ವಾಮಿ ದೇವಾಲಯವೂ ಒಂದು. ಪ್ರಾಚೀನ ಕಾಲದಲ್ಲಿ ಈ ಗುಹಾಂತರ ದೇವಾಲಯದಲ್ಲಿ ಗೌತಮ ಮಹರ್ಷಿಗಳು ತಪವನ್ನಾಚರಿಸಿದ್ದರು. ಇಲ್ಲಿರುವ ಶಿವಲಿಂಗಕ್ಕೆ ತ್ರಿಕಾಲ ಪೂಜೆ ಸಲ್ಲಿಸುತ್ತಿದ್ದರು ಎಂದು ಸ್ಥಳ ಪುರಾಣ ಸಾರುತ್ತದೆ. ಹೀಗಾಗೇ ಇದಕ್ಕೆ ಗೌತಮ ಕ್ಷೇತ್ರ ಎಂದೂ ಹೆಸರು ಬಂದಿದೆ.

Join Our Whatsapp Group

ಭಾರದ್ವಾಜ ಮುನಿಗಳು ಕೂಡ ಈ ಗುಹೆಯಲ್ಲಿ ತಪವನ್ನಾಚರಿಸಿದ್ದರು ಎಂಬ ಐತಿಹ್ಯಕ್ಕೆ ಪೂರಕವಾಗಿ ಈ ದೇವಾಲಯ ಗರ್ಭಗುಡಿಯ ಸುತ್ತ ಇರುವ ಗುಹಾ ಮಾರ್ಗದಲ್ಲಿ ಗೌತಮ ಮಹರ್ಷಿಗಳ ಹಾಗೂ ಭಾರದ್ವಾಜರ ಶಿಲಾಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಇದೇ ಮಾರ್ಗದಲ್ಲಿ ಸಪ್ತ ಮಾತೃಕೆಯರಾದ ಬ್ರಾಹ್ಮೀ, ಮಾಹೇಶ್ವರಿ, ವಾರಾಹಿ, ಚಾಮುಂಡಿ, ವೈಷ್ಣವಿ ಹಾಗೂ ಶ್ರೀದೇವಿ, ಭೂದೇವಿಯ ವಿಗ್ರಹಗಳೂ ಇವೆ.

ಅತ್ಯಂತ ಸುಂದರ ಹಾಗೂ ರಮಣೀಯವಾದ ಈ ದೇವಾಲಯದ ಮುಂಭಾಗದಲ್ಲಿ ವಿಜಯನಗರ ಶೈಲಿಯ ೧೪ ಕಂಬಗಳಿರುವ ಮಂಟಪವಿದೆ. ಈ ದೇವಾಲಯದ ವಿಶಾಲ ಪ್ರಾಂಗಣದಲ್ಲಿ ಬಹಳ ಅಪರೂಪವಾದ ಹಾಗೂ ಅತ್ಯಂತ ಸುಂದರವಾದ ಶಿಲಾರಚನೆಗಳಿವೆ. ಈ ಪೈಕಿ ಎರಡು ಸೂರ್ಯಪಾನ, ಡಮರುಗ ಹಾಗೂ ತ್ರಿಶೂಲದ ಎತ್ತರದ ಸ್ತಂಭಗಳು ಈ ದೇವಾಲಯದ ಕೀರ್ತಿಗೆ ಕಳಶದಂತಿವೆ. ಇವುಗಳನ್ನು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಕಟ್ಟಿದರೆಂದು ತಿಳಿದುಬಂದಿದೆ.

ಈ ಗುಹಾಂತರ ದೇವಾಲಯದಲ್ಲಿ ಎರಡು ಸುರಂಗ ಮಾರ್ಗಗಳಿದ್ದು, ಒಂದು ಸುರಂಗವು ತುಮಕೂರು ರಸ್ತೆಯಲ್ಲಿರುವ ಶಿವಗಂಗೆಗೂ ಮತ್ತೊಂದು ವಿಶ್ವನಾಥನ ನೆಲೆವೀಡಾದ ಕಾಶಿಗೂ ಹೋಗುತ್ತದೆಂಬುದು ನಂಬಿಕೆ.

ವಿಶೇಷ: ಈ ಪ್ರಾಚೀನ ದೇವಾಲಯದ ವಾಸ್ತು ವಿನ್ಯಾಸ ಅತ್ಯಂತ ಮನಮೋಹಕವಾಗಿದ್ದು, ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಪ್ರತಿವರ್ಷ ಮಕರ ಸಂಕ್ರಾತಿಯ ದಿನ ಸಂಜೆ ಸೂರ್ಯನ ಕಿರಣಗಳು ಲಿಂಗದ ಮುಂದಿರುವ ನಂದಿಯ ಕೊಂಬಿನಿಂದ ಹಾದು, ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಈ ವಿಸ್ಮಯವನ್ನು ಕಾಣಲು ಅಂದು ಇಲ್ಲಿ ಜನಜಾತ್ರೆಯೇ ಸೇರುತ್ತದೆ. ಕಾರ್ತೀಕ ಮಾಸದ ಎಲ್ಲ ಸೋಮವಾರ ಹಾಗೂ ಶಿವರಾತ್ರಿಯ ದಿನ ಇಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ದೇವಾಲಯದ ಪಕ್ಕದಲ್ಲೇ ಇರುವ ತಿಮ್ಮೇಶಪ್ರಭು ಉದ್ಯಾನದಲ್ಲಿ ಸಂಗೀತ, ನೃತ್ಯ ಕಾರಂಜಿಯೂ ಇದೆ. ಪ್ರತಿ ಭಾನುವಾರ ಸಂಜೆ ೭ರ ನಂತರ ಇಲ್ಲಿ ನೃತ್ಯಕಾರಂಜಿಯ ವೈಭವ ಕಣ್ತುಂಬಿಕೊಳ್ಳಬಹುದು.

ಹಿಂದಿನ ಲೇಖನಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಅಡಿ ಮಾಸಿಕ 10 ಕೆಜಿ ಅಕ್ಕಿ: ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನಜೂನ್ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ: ಸಿದ್ದರಾಮಯ್ಯ