ಮನೆ ರಾಜ್ಯ ವಿದ್ಯಾರ್ಥಿಗಳಲ್ಲಿ ಹೊಸ ರೂಪದ ಶಿಕ್ಷಣ ನೀತಿಯನ್ನು ಅಳವಡಿಸಬೇಕು: ವಿ ಸುನಿಲ್ ಕುಮಾರ್

ವಿದ್ಯಾರ್ಥಿಗಳಲ್ಲಿ ಹೊಸ ರೂಪದ ಶಿಕ್ಷಣ ನೀತಿಯನ್ನು ಅಳವಡಿಸಬೇಕು: ವಿ ಸುನಿಲ್ ಕುಮಾರ್

0

ಮೈಸೂರು: ವಿದ್ಯಾರ್ಥಿಗಳಲ್ಲಿ ಹೊಸ ರೂಪದ ಶಿಕ್ಷಣ ನೀತಿಯನ್ನು ಅಳವಡಿಸಬೇಕು. ಇದರಿಂದ ಶಿಲ್ಪಕಲೆ ಮತ್ತು ಸಾಹಿತ್ಯದಲ್ಲಿ ಪರಿಣಿತಿಯನ್ನು ಪಡೆಯಬಹುದಾಗಿದ್ದು, ಶಿಲ್ಪಕಲೆ ಹಾಗೂ ಚಿತ್ರಕಲೆಗಳ ಮೂಲಕ ಜಗತ್ತಿನ ಗಮನವನ್ನು ಸೆಳೆಯುವಲ್ಲಿ ಇದು ಉಪಯುಕ್ತವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆಯ ಸಚಿವರಾದ ವಿ.ಸುನಿಲ್ ಕುಮಾರ್ ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ 3 ದಿನಗಳ ಕಾವಾಮೇಳ – 2023 ಮತ್ತು ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದ ಅವರು ವಿವಿಧ ರೀತಿಯ ಕಲಾಕೃತಿಗಳನ್ನು ವೀಕ್ಷಣೆ ಮಾಡಿದರು. ಕರ್ನಾಟಕ ಸರ್ಕಾರವು ಕನ್ನಡ ನಾಡಿನ ಸಂಸ್ಕೃತಿಯನ್ನು ಉಳಿಸುವುದಕ್ಕೆ ಮುಂದಾಗುತ್ತಿದ್ದು, ಇಂದು 13 ಕೋಟಿ ವೆಚ್ಚದಲ್ಲಿ ಕಾವಾ ಕಾಲೇಜಿನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂದರು.

ರಾಜ್ಯದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾವಾ ಕೂಟ ಒಂದಾಗಿದೆ ಮಕ್ಕಳಲ್ಲಿ ಸೃಜನಾತ್ಮಕವಾದ ಚಟುವಟಿಕೆ ಮತ್ತು ಮಕ್ಕಳ ಪ್ರತಿಭೆಗಳಿಗೆ ತಕ್ಕಂತೆ ಸೂಕ್ತವಾದ ತರಬೇತಿ ನೀಡುವುದು ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ಉದ್ದೇಶವಾಗಿದೆ. ಮೈಸೂರಿನ ರಾಜರ ಕಾಲದಲ್ಲಿ ಆರಂಭವಾದ ಈ ಸಂಸ್ಥೆಯು ಹಂತ ಹಂತವಾಗಿ ನೂರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಇಲ್ಲಿನ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಮೂಲಕ ಹೊಸ ರೂಪದ ಶಿಕ್ಷಣ ವ್ಯವಸ್ಥೆಗೆ ತೊಡಗಿಸಿಕೊಂಡಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರವು ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇವಲ ರಸ್ತೆ ನಿರ್ಮಾಣ ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗದೆ, ಸಾಂಸ್ಕೃತಿಕವಾಗಿಯೂ ಸಮಾಜವನ್ನು ನಿರ್ಮಾಣ ಮಾಡಲು ಹತ್ತಾರು ಭಾಷೆ ಮತ್ತು ಸಂಸ್ಕೃತಿಗಳಿಗೆ ಉತ್ತೇಜನ ನೀಡುತ್ತಾ ಬಂದಿದೆ. ಕಾವಾದಲ್ಲಿರುವ ವಿದ್ಯಾರ್ಥಿಗಳ ಕಲೆಯು ಅದ್ಭುತವಾದ ಕಲ್ಪನೆಯಾಗಿದೆ. ಇವರ ಕಲ್ಪನೆಗಳು ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ಉಪಯುಕ್ತವಾಗಲಿ, ಭಾರತವು ಸಾಂಸ್ಕೃತಿಕವಾಗಿ ಶಿಲ್ಪಕಲೆ ಹಾಗೂ ಚಿತ್ರಕಲೆಗಳ ಮೂಲಕ ಜಗತ್ತಿನ ಗಮನವನ್ನು ಸೆಳೆಯಲಿ ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯು ಮುಂದಿನ ದಿನಗಳಲ್ಲಿ ನಶಿಸಿಹೋಗುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನವನ್ನು ನೀಡಲಾಗುತ್ತಿದೆ. ಈ ಸಂಬಂಧಿತ ಅಭಿಯಾನವನ್ನು ಇಡೀ ರಾಜ್ಯದಲ್ಲಿ ನಡೆಸಲಾಗುವುದು ಎಂದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ನರಸಿಂಹರಾಜ ಕ್ಷೇತ್ರದ ಶಾಸಕರಾದ ತನ್ವಿರ್ ಸೇಠ್ ಅವರು ಮಾತನಾಡಿ ಕಾವಾ ಸಂಸ್ಥೆಯು ಮೈಸೂರು ಮಹಾರಾಜರ ಕೊಡುಗೆಯಾಗಿದೆ. ಶತಮಾನೋತ್ಸವನ್ನು ಆಚರಿಸುತ್ತಿರುವ ಅನೇಕ ಸಂಸ್ಥೆಗಳು ನಮ್ಮ ಮೈಸೂರಿನಲ್ಲಿ ಇವೆ. ವಿಶೇಷವಾಗಿ ಕಾವಾ ಸಂಸ್ಥೆಯು 116 ವರ್ಷಗಳ ಇತಿಹಾಸವನ್ನು ಹೊಂದಿರುವ ಕಾಲೇಜಾಗಿದೆ. ಈ ಸಂಸ್ಥೆಗೆ ಸ್ವಂತ ಕಟ್ಟಡ ಮತ್ತು ಸ್ವಂತ ಸ್ಥಳ ಒಂದು ಕಲ್ಪನೆಯಾಗಿತ್ತು ಇಂದು ಅದು ಪೂರ್ಣವಾಗಿದೆ. ಈ ಸಂಸ್ಥೆಯು ಮೈಸೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದ್ದರೂ ಕೂಡ ಇಲ್ಲಿ ಶಿಕ್ಷಕರ ಕೊರತೆ ಇದ್ದು ಇದರ ಬಗ್ಗೆ ಮಾನ್ಯ ಸಚಿವರು ಗಮನಹರಿಸಬೇಕು ಎಂದು ಮನವಿ ಮಾಡಿದರು.

ಕಾವಾ ಸಂಸ್ಥೆಯ ಡೀನ್ ದೇವರಾಜ್ ಅವರು ಮಾತನಾಡಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ನಿರ್ಮಾಣವಾದ ದಿನಗಳಿಂದ ಉನ್ನತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ವಿವಿಧ ರೀತಿಯ ಕೋರ್ಸ್ಗಳನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭಾಸವನ್ನು ನೀಡುತ್ತಾ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಶಿವಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಿರ್ಲೆ ಶ್ರೀನಿವಾಸಗೌಡ ವಿವಿಧ ಇಲಾಖೆಗಳು ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಜೆಡಿಎಸ್ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ, ಚಿಕಿತ್ಸೆ: ಹೆಚ್.ಡಿ.ಕುಮಾರಸ್ವಾಮಿ ಭರವಸೆ
ಮುಂದಿನ ಲೇಖನಜನರ ಬದುಕನ್ನು ಜಟಕಾ ಬಂಡಿ ಮಾಡಿದ ಬಿಜೆಪಿ ಸರ್ಕಾರ: ಎಂ. ಲಕ್ಷ್ಮಣ್