ಮನೆ ಕಾನೂನು ನ್ಯಾಯಾಂಗ ದಾಖಲೆಗಳಲ್ಲಿ ಸೂಕ್ತವಲ್ಲದ ಲಿಂಗ ಸಂಬಂಧಿ ಪದಗಳನ್ನು ತಪ್ಪಿಸಲು ಪದಕೋಶ ಬಿಡುಗಡೆ: ಸಿಜೆಐ ಚಂದ್ರಚೂಡ್

ನ್ಯಾಯಾಂಗ ದಾಖಲೆಗಳಲ್ಲಿ ಸೂಕ್ತವಲ್ಲದ ಲಿಂಗ ಸಂಬಂಧಿ ಪದಗಳನ್ನು ತಪ್ಪಿಸಲು ಪದಕೋಶ ಬಿಡುಗಡೆ: ಸಿಜೆಐ ಚಂದ್ರಚೂಡ್

0

ನ್ಯಾಯಾಲಯದ ಆದೇಶಗಳು ಮತ್ತು ಕಾನೂನು ದಾಖಲೆಗಳಲ್ಲಿ ಮಹಿಳೆಯರೆಡೆಗೆ ಲಘುವಾದ ಮತ್ತು ಅನುಚಿತವಾದ ಭಾಷಾ ಪ್ರಯೋಗಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೂಕ್ತವಲ್ಲದ ಪದಗಳ ಪದಕೋಶ ಬಿಡುಗಡೆ ಮಾಡುವ ಯೋಜನೆಯೊಂದನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಪ್ರಕಟಿಸಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸುಪ್ರೀಂ ಕೋರ್ಟ್ ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ  ಸಿಜೆಐ ಈ ವಿಚಾರ ಪ್ರಕಟಿಸಿದರು. 

 “ಕೆಲ ವರ್ಷಗಳ ಹಿಂದೆ ನಾನು ಆರಂಭಿಸಿದ ಯೋಜನೆಯೊಂದು ಲಿಂಗ ಕುರಿತಾದ ಸಂವಾದದಲ್ಲಿ ಸೂಕ್ತವಲ್ಲದ ಪದಗಳ ಕಾನೂನು ಶಬ್ದಕೋಶಕ್ಕೆ ಸಂಬಂಧಿಸಿದುದಾಗಿತ್ತು. ಉದಾಹರಣೆಗೆ ಸಂಬಂಧಲ್ಲಿರುವ ಮಹಿಳೆಯನ್ನು ಉಪಪತ್ನಿ ಎಂದು ಉಲ್ಲೇಖಿಸಿರುವ ತೀರ್ಪುಗಳನ್ನು ನಾನು ನೋಡಿದ್ದೇನೆ. ಕೌಟುಂಬಿಕ ಹಿಂಸಾಚಾರ ಕಾಯಿದೆ ಮತ್ತು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಎಫ್ಐಆರ್’ಗಳನ್ನು ರದ್ದುಪಡಿಸುವ ತೀರ್ಪುಗಳಲ್ಲಿ ಮಹಿಳೆಯರನ್ನು ʼಕೀಪ್ಸ್ʼ (ಇಟ್ಟುಕೊಂಡವಳು) ಎಂದು ಕರೆದಿರುವುದನ್ನು ಗಮನಿಸಿದ್ದೇನೆ. ಈ ಪದಗಳ ಮೇಲೆ ನಾವು ಗಮನ ಹರಿಸುವುದು ಕೇವಲ ನ್ಯಾಯಾಧೀಶರಾಗಿ ಮಾತ್ರವಲ್ಲದೆ ಇಂತಹ ಪದಗಳ ಬಳಕೆ ಲಿಂಗ ಸಂವೇದನೆಗೆ ನಮ್ಮ ಮುಕ್ತತೆಯನ್ನು ಏಕೆ ನಿರಾಕರಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲೂ ಅಗತ್ಯವಾಗಿದೆ” ಎಂದರು.

ಶೀಘ್ರದಲ್ಲಿಯೇ ಈ ಪದಕೋಶವನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಅವರ ಅಧ್ಯಕ್ಷತೆಯ ಸಮಿತಿಯು ಕಾನೂನು ಪದಕೋಶವನ್ನು ಸಿದ್ಧಪಡಿಸಿದ್ದು ಮದ್ರಾಸ್ ಹೈಕೋರ್ಟ್’ನ ನಿವೃತ್ತ ನ್ಯಾಯಮೂರ್ತಿ ಪ್ರಭಾ ಶ್ರೀದೇವನ್, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನ ನಿವೃತ್ತಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ಪ್ರಸ್ತುತ ಕೋಲ್ಕತ್ತಾದಲ್ಲಿರುವ ಪಶ್ಚಿಮ ಬಂಗಾಳ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಜುಮಾ ಸೇನ್ ಅವರನ್ನು ಸಮಿತಿ ಒಳಗೊಂಡಿದೆ. 

ಸಮಾಜದಲ್ಲಿ ಮತ್ತು ಕಾನೂನು ವೃತ್ತಿಯಲ್ಲಿ ಮಹಿಳೆಯರು ವಿಶೇಷವಾಗಿ ಭಾಷೆಯ ಬಳಕೆ ಮೂಲಕ ಹೇಗೆ ತರತಮಕ್ಕೆ ಒಳಗಾಗುತ್ತಿದ್ದಾರೆ ಎಂಬುದರ ಮೇಲೆ ಇಂತಹ ಪದಕೋಶ ಬೆಳಕು ಚೆಲ್ಲಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.