ಚಿಕ್ಕಮಗಳೂರು: ಗೋ ಬ್ಯಾಕ್ ಶೋಭಾ ಕರಂದ್ಲಾಜೆ, ಶೋಭಾ ಹಾಠಾವೋ ಎಂದು ಸಿ,ಟಿ.ರವಿ ಬೆಂಬಲಿಗರು ಅಭಿಯಾನ ನಡೆಸಿದ್ದು, ಸದ್ಯ ಪೋಸ್ಟರ್ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಶೋಭಾ ವಿರುದ್ಧ ಗೋ ಬ್ಯಾಕ್ ಶೋಭಾ ,ಶೋಭಾ ಹಠಾವೋ ಬಿಜೆಪಿ ಬಚಾವೋ ಅಭಿಯಾನ ನಡೆಯುತ್ತಿದೆ. ಟಿಕೆಟ್ ನೀಡದಂತೆ ಕ್ಯಾಂಪೇನ್ ನಡೆಸಲಾಗಿದೆ. ಇದು ಬಿಜೆಪಿ ಹೈ ಕಮಾಂಡ್ ಕೋಪಕ್ಕೂ ಕಾರಣವಾಗಿದೆ.
ಶೋಭಕ್ಕ ಎಲ್ಲಿದ್ದೀರ?, ಶೋಭಕ್ಕ ಕಾಣೆ ಎಂದು ತರೀಕೆರೆಯಿಂದ ಚಿಕ್ಕಮಗಳೂರುವರೆಗೂ ರಾತ್ರೋರಾತ್ರಿ ಪೋಸ್ಟರ್ಗಳನ್ನು ಅಂಟಿಸಿದ್ದ ನಾಲ್ವರು ಯುವಕರಾದ ಸಂಜು, ಸಂಜಯ್, ವಿಷ್ಣು, ಚಂದ್ರಶೇಖರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಯುವಕರು ತರೀಕೆರೆ ಮೂಲದವರು. ತರೀಕೆರೆ ಪಟ್ಟಣದಿಂದ ಚಿಕ್ಕಮಗಳೂರು ನಗರದ ವರೆಗೂ ಪೋಸ್ಟರ್ ಅಂಟಿಸಿದ್ದರು. ನಗರ ಸಭೆ ಪೌರ ಕಾರ್ಮಿಕ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಇನ್ನು ಯುವಕರು ಹಣ ನೀಡಿ ಪೋಸ್ಟರ್ ಅಂಟಿಸಲು ಹೇಳಿದ್ರು ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಬಸವನಹಳ್ಳಿ ಪೊಲೀಸರು ಪೋಸ್ಟರ್ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಶೋಭಾ ಕರಂದ್ಲಾಜೆ ತಿರುಗೇಟು
ಕಳೆದ ಚುನಾವಣೆಯಲ್ಲಿ ಗೋ ಬ್ಯಾಕ್ ಅಭಿಯಾನ ಮಾಡಿದ್ರು. ಇವತ್ತು ಅದನ್ನೇ ಮಾಡಲು ಹೊರಟಿದ್ದಾರೆ. ಕೆಲವರು ದುಡ್ಡಿನ ಮದದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ. ಕೆಲವು ಗಂಡಸರಿಗೆ ಅಧಿಕಾರ ನಮ್ಮ ಬಳಿಯೇ ಇರಬೇಕು ಎಂಬ ಭಾವನೆ ಇರುತ್ತೆ. ದರ್ಪದಿಂದ ಇಂತಹ ಕೆಲಸವನ್ನ ಮಾಡಿಸುತ್ತಿದ್ದಾರೆ. ನಾನು ಯಡಿಯೂರಪ್ಪ, ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇದಕ್ಕೆಲ್ಲ ಉತ್ತರ ನಾನು ಕೊಡಲ್ಲ, ನಮ್ಮ ಹೈ ಕಮಾಂಡ್ ಕೊಡುತ್ತೆ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಎಲ್ಲವನ್ನೂ ಹೈ ಕಮಾಂಡ್ ಗಮನಿಸಿದೆ. ಸರಿಯಾದ ಉತ್ತರ ನನ್ನ ಹಿರಿಯರು ಕೊಡುತ್ತಾರೆ. ನನ್ನ ಹಿರಿಯರು ನನ್ನ ಪರವಾಗಿ ಉತ್ತರ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ಪತ್ರ ಯಾರು ಬರೆದು ಯಾರು ಪೋಸ್ಟ್ ಮಾಡಿದ್ರು ಎಲ್ಲವೂ ಗೊತ್ತಿದೆ. ಕೇಂದ್ರ ಎಲ್ಲವನ್ನೂ ವರದಿ ತರಿಸಿಕೊಂಡಿದೆ. ಇದಕ್ಕೆ ಉತ್ತರ ಕೊಡುತ್ತಾರೆ. ಚುನಾವಣೆಯಲ್ಲಿ ಇಂತಹ ಕೆಲಸಗಳು ನಡೆದಾಗ ಕೇಂದ್ರ ವರದಿಯನ್ನ ತರಿಸಿಕೊಳ್ಳುತ್ತೆ. ಸತ್ಯ ಕೇಂದ್ರಕ್ಕೆ ತಲುಪಿದೆ. ಉತ್ತರ ಅವರೆ ಕೊಡುತ್ತಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.