ಮನೆ ಕೃಷಿ 14 ಖಾರಿಫ್‌ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದ ಕೇಂದ್ರ

14 ಖಾರಿಫ್‌ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದ ಕೇಂದ್ರ

0

ಹೊಸದಿಲ್ಲಿ: ಕೇಂದ್ರ ಕ್ಯಾಬಿನೆಟ್ 2023-24ರ ಮಾರುಕಟ್ಟೆ ಋತುವಿಗಾಗಿ ಖಾರಿಫ್ ಬೆಳೆಗಳ ಹೆಚ್ಚಿದ ಕನಿಷ್ಠ ಬೆಂಬಲ ಬೆಲೆಯನ್ನು (MSP) ಅನುಮೋದಿಸಿದ್ದು, ಬೆಳೆಗಾರರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸಲು ಈ ಕ್ರಮವಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಹೇಳಿದ್ದಾರೆ.

Join Our Whatsapp Group

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯ ನಿರ್ಧಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಸಚಿವ ಪಿಯೂಷ್‌ ಗೋಯಲ್‌, 14 ಖಾರಿಫ್‌ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.

2023-24ರಲ್ಲಿ ಸಾಮಾನ್ಯ ದರ್ಜೆಯ ಹಾಗೂ ಗ್ರೇಡ್‌ ಎ ದರ್ಜೆಯ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ ಗೆ 143 ರೂ. ಹೆಚ್ಚಿಸಲಾಗಿದೆ. ಇದರಿಂದ ಸಾಮಾನ್ಯ ದರ್ಜೆಯ ಭತ್ತದ ದರ ಕ್ವಿಂಟಾಲ್‌ಗೆ 2,183 ರೂ.ಗೆ ಏರಿಕೆಯಾಗಿದ್ದರೆ, ಗ್ರೇಡ್‌ ಎ ದರ್ಜೆಯ ಭತ್ತದ ಕನಿಷ್ಠ ಬೆಂಬಲ ಬೆಲೆ 2,203 ರೂ.ಗೆ ತಲುಪಿದೆ.

ಹೆಸರು ಬೇಳೆಯ ಎಂಎಸ್‌ ಪಿ ದರದಲ್ಲಿ ಗರಿಷ್ಠ 883 ರೂ. (ಶೇ. 10.4) ಏರಿಕೆ ಮಾಡಲಾಗಿದ್ದು, ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ಗೆ 8,558 ರೂ.ಗೆ ಮುಟ್ಟಿದೆ. ಸೂರ್ಯಕಾಂತಿಯ ಎಂಎಸ್‌ಪಿಯನ್ನು 7,734 ರೂ. ಹೆಚ್ಚಿಸಲಾಗಿದೆ.

ಸೋಯಾಬೀನ್‌ ಗೆ ಪ್ರಸ್ತುತ ಕ್ವಿಂಟಾಲ್‌ಗೆ 4,600 ರೂ. ಕನಿಷ್ಠ ಬೆಂಬಲ ಬೆಲೆ ಇದ್ದರೆ, ಎಳ್ಳು ಬೆಳೆಯ ಎಂಎಸ್‌ ಪಿಯನ್ನು ಶೇ. 10.3ರಷ್ಟು ಹೆಚ್ಚಿಸಲಾಗಿದ್ದು ಕ್ವಿಂಟಾಲ್‌ ಗೆ 8,635 ರೂ.ಗೆ ಏರಿಕೆ ಮಾಡಲಾಗಿದೆ. ನೆಲಕಡಲೆಗೆ ಶೇ. 9ರಷ್ಟು ಹೆಚ್ಚಿಸಲಾಗಿದ್ದು ಕ್ವಿಂಟಾಲ್‌ಗೆ 6,357 ರೂ.ಗೆ ಹೆಚ್ಚಿಸಲಾಗಿದೆ.

ಹತ್ತಿ ಎಂಎಸ್‌ ಪಿಯನ್ನು ಕ್ವಿಂಟಾಲ್‌ಗೆ ಶೇ. 8.9ರಷ್ಟು ಹೆಚ್ಚಿಸಲಾಗಿದ್ದು ಕ್ವಿಂಟಾಲ್‌ ಗೆ 6,620 ರೂ.ಗೆ ತಲುಪಿದೆ. ಹತ್ತಿಗೆ (ಉದ್ದದ ಗಾತ್ರದ ತಳಿ) ಕನಿಷ್ಠ ಬೆಂಬಲ ಬೆಲೆ ಶೇ. 10ರಷ್ಟು ಏರಿಕೆ ಮಾಡಲಾಗಿದ್ದು ಸದ್ಯ ಪ್ರತಿ ಕ್ವಿಂಟಲ್‌ಗೆ 7,020 ರೂ. ದರ ಇದೆ.

ಈ ಹಿಂದೆ ದೇಶದ ಆಹಾರ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ಬೆಳೆ ಹಾನಿಯನ್ನು ಕಡಿಮೆ ಮಾಡಲು ಮತ್ತು ರೈತರ ಸಂಕಷ್ಟದ ಮಾರಾಟವನ್ನು ತಡೆಯಲೂ ಕೇಂದ್ರ ಸರಕಾರ ಮುಂದಾಗಿತ್ತು. ಈ ಸಂಬಂಧ ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಸಾಮರ್ಥ್ಯವನ್ನು ರಚಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಕಳೆದ ವಾರ 1 ಲಕ್ಷ ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಿತ್ತು.