ಮನೆ ರಾಜ್ಯ ಪ್ರತಿಯೊಬ್ಬರ ಜೀವನದಲ್ಲಿಯೂ ಗುರಿ, ಗುರು ಬಹುಮುಖ್ಯ: ಜಿ.ಟಿ.ದೇವೇಗೌಡ

ಪ್ರತಿಯೊಬ್ಬರ ಜೀವನದಲ್ಲಿಯೂ ಗುರಿ, ಗುರು ಬಹುಮುಖ್ಯ: ಜಿ.ಟಿ.ದೇವೇಗೌಡ

0

ಮೈಸೂರು: ಪ್ರತಿಯೊಬ್ಬರ ಜೀವನದಲ್ಲಿಯೂ ಗುರಿ, ಗುರು ಬಹುಮುಖ್ಯ ಹಲವರ ಜೀವನಗಳಲ್ಲಿ ತಮ್ಮ ಗುರುಗಳು ಬೀರಿದ ಪ್ರಭಾವದಿಂದ ತಾವು ತಮ್ಮ ಜೀವನದ ದಿಕ್ಕನ್ನೇ ಬದಲಿಸಿ ಯಶಸ್ವಿಯಾದ ಉದಾಹರಣೆಗಳಿವೆ ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಹೂಟಗಳ್ಳಿಯ ಸರಸ್ವತಿ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತೀಯ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ನೀಡಿದ, ಶಿಕ್ಷಣ ತಜ್ಞರು, ಭಾರತದ ಮೊದಲ ಉಪ ರಾಷ್ಟ್ರಪತಿ ಹಾಗೂ ದ್ವಿತೀಯ ರಾಷ್ಟ್ರಪತಿ, ಶಿಕ್ಷಕ, ದಾರ್ಶನಿಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ, ಈ ಶುಭ ಸಂದರ್ಭದಲ್ಲಿ ತಮ್ಮಲ್ಲರಿಗೂ ಶಿಕ್ಷಕರ ದಿನಾಚರಣೆಯಂದು ಜಿ.ಟಿ.ದೇವೇಗೌಡ ಶುಭಕೋರಿದರು.

ಪ್ರತಿಯೊಬ್ಬರ ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ, ಅಷ್ಟೇ ಗುರುಗಳೂ ಮುಖ್ಯ ಏಕೆಂದರೆ, ಆ ಗುರಿ ಮುಟ್ಟಲು ಸೋಪಾನ ಉತ್ತಮ ಗುರುಗಳಿದ್ದರೆ ಮಾತ್ರ ಸಾಧ್ಯ ಎಂದರು.

ಸೀಮಿತ ಗ್ರಹಿಕೆಗಳ ಮೂಲಕ ಅರ್ಥವಾಗದಂಥ ವಿಷಯಗಳನ್ನು ಅರ್ಥ ಮಾಡಿಸುವ ಕಲೆ ಶಿಕ್ಷಕರಿಗೆ ಚೆನ್ನಾಗಿ ಗೊತ್ತು. ಜೀವ ಪರ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಜೀವ ತತ್ವಗಳನ್ನು ಜೀವನ ಸಂದೇಶಗಳನ್ನು ಮೈಗೂಡಿಸಿಕೊಳ್ಳಲು ಕಲಿಸುವ ಕಲಾವಿದ. ಬದುಕಿನ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಸುಲಭವಾಗಿ ಬಿಡಿಸಿ, ಸುಂದರವಾದ ಜೀವನವನ್ನು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುವ ಶಕ್ತಿ ಶಿಕ್ಷಕರಿಗಿದೆ ಎಂದು ಹೇಳಿದರು.

ಪ್ರತಿಭಾ ಶೋಧದಿಂದ ಮಾತ್ರ ಆರೋಗ್ಯ ಪೂರ್ಣ ಸಮಾಜಕ್ಕೆ ಅಗತ್ಯವಿರುವ ಎಲ್ಲ ತರಹದ ವ್ಯಕ್ತಿಗಳನ್ನು ಶಿಕ್ಷಕರು ಸಮಾಜಕ್ಕೆ ನೀಡಬಲ್ಲರು. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದ್ದು, ರಾಷ್ಟç ನಿರ್ಮಾಣಕ್ಕಾಗಿ ಶಿಕ್ಷಕರು ಹಗಲಿರುಳು ದುಡಿಯುತ್ತಿದ್ದಾರೆ, ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ತಂದೆ-ತಾಯಿಯಿಂದ ಸಾಧ್ಯವಾಗದನ್ನು ಶಿಕ್ಷಕರು ಮಾಡುತ್ತಾರೆ. ಶಿಕ್ಷಕರು ಒಗ್ಗೂಡಿ ದಕ್ಷತೆಯಿಂದ ಕಾರ್ಯನಿರ್ವಹಸಿದ್ದಲ್ಲಿ ಸಂಪನ್ನ ಮತ್ತು ಪ್ರಬಲ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ವಾತ್ಸಲ್ಯಪೂರ್ವಕ ಹಾಗೂ ದಕ್ಷತೆಯಿಂದ ವಿದ್ಯಾದಾನ ಮಾಡುತ್ತಾರೆ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಗ್ರಹಿಸಬೇಕು ಎಂದು ಕಠೋಪನಿಷತ್ತು ಹೇಳುತ್ತದೆ. ಶಿಕ್ಷಕರ ಜವಾಬ್ದಾರಿ ಎಷ್ಟು ದೊಡ್ಡದೋ ಅವರ ಸಮಸ್ಯೆಗಳೂ ಅಷ್ಟೇ ದೊಡ್ಡವು. ಶಿಲ್ಪಿಯೊಬ್ಬ ಕಲ್ಲನ್ನು ಕೆತ್ತಿ ಸುಂದರವಾದ ಮೂರ್ತಿ ತಯಾರು ಮಾಡುವುದಕ್ಕಿಂತ ಕಷ್ಟ ಸಾಧ್ಯವಾದ ಕೆಲಸ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರು ಶ್ರಮಿಸುವುದಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಪಾಠ ಮಾಡುವುದರ ಜೊತೆ ಜೊತೆಗೆ ಅವರ ವಿವಿಧ ಸಮಸ್ಯೆಗಳಿಗೆ ಪರಿಹಾರೋಪಾಯ ನೀಡುವುದು, ಸಂದರ್ಭೋಚಿತ ಸಲಹೆ ನೀಡುವುದು ಶಿಕ್ಷಕನ ಮುಖ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಶಿಕ್ಷಕನಿಗೂ ವಿದ್ಯಾರ್ಥಿಗೂ ಅವಿನಾಭಾವ ಸಂಬಂಧವಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕ ಹೇಳಿದ್ದನೆಲ್ಲ ನಂಬುತ್ತದೆ. ಮಗುವಿಗೆ ಶಿಕ್ಷಕರೇ ಮೊದಲ ಆದರ್ಶ. ಇಂಥ ಸ್ಥಿತಿಯಲ್ಲಿ ಶಿಕ್ಷಕನ ಜವಾಬ್ದಾರಿ ನಿಜವಾಗಿಯೂ ಮಹತ್ವದ್ದಾಗಿರುತ್ತದೆ. ಹಸಿ ಮಣ್ಣಿನ ಮುದ್ದೆಯಂತೆ ಇರುವ ಮಗುವಿನ ಮನಸ್ಸನ್ನು ತಿದ್ದಿ ತೀಡಿ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಗುರುವಿನದು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.