ಮನೆ ಅಪರಾಧ ಟಿವಿ ಧಾರಾವಾಹಿ ದೃಶ್ಯದಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಸಂಚಾರ: ನಟಿಗೆ ದಂಡ

ಟಿವಿ ಧಾರಾವಾಹಿ ದೃಶ್ಯದಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಸಂಚಾರ: ನಟಿಗೆ ದಂಡ

0

ಮಂಗಳೂರು: ಟಿವಿ ಧಾರಾವಾಹಿಯ ದೃಶ್ಯವೊಂದರಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ ನಟಿಗೆ ಮಂಗಳೂರಿನ ವೀಕ್ಷಕರ ದೂರು ಅನುಸರಿಸಿ ಪೊಲೀಸರು ದಂಡ ಹಾಕಿದ್ದಾರೆ.

Join Our Whatsapp Group

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸೀತಾರಾಮ’ ಹೆಸರಿನ ಧಾರಾವಾಹಿಯ 14ನೇ ಸಂಚಿಕೆಯಲ್ಲಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಸಂಚರಿಸುವ ದೃಶ್ಯ ಪ್ರಸಾರವಾಗಿತ್ತು. ಇದರಲ್ಲಿ ಸಹ ಸವಾರಳಾಗಿದ್ದ ಯುವತಿ ಹೆಲ್ಮೆಟ್ ಹಾಕಿರಲಿಲ್ಲ. ಧಾರಾವಾಹಿಯ ಈ ದೃಶ್ಯವನ್ನು ಗಮನಿಸಿದ ಮಂಗಳೂರಿನ ಜಯಪ್ರಕಾಶ್ ಎಕ್ಕೂರು ಎಂಬವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.

ಧಾರಾವಾಹಿಯಲ್ಲಿ ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ನಟ-ನಟಿಯರು ಸಂಚಾರ ನಿಯಮ ಉಲ್ಲಂಘಿಸುವ ಮೂಲಕ ಪ್ರೇಕ್ಷಕರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ನಟಿ, ಧಾರಾವಾಹಿಯ ನಿರ್ದೇಶಕ ಮತ್ತು ಪ್ರಸಾರ ಮಾಡಿದ ವಾಹಿನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದರು.

ಈ ಪ್ರಕರಣವನ್ನು ಪೊಲೀಸ್ ಆಯುಕ್ತರು ಮಂಗಳೂರು ಸಂಚಾರ ಪೂರ್ವ ಠಾಣೆಗೆ ವಹಿಸಿದ್ದರು. ಅದರಂತೆ ಜಯಪ್ರಕಾಶ್ ಅವರಿಗೆ ಠಾಣೆಯಿಂದ ಹಿಂಬರಹ ನೀಡಿ, ದ್ವಿಚಕ್ರ ವಾಹನದ ಮಾಲಕರು ಮತ್ತು ಧಾರಾವಾಹಿಯ ನಿರ್ದೇಶಕರಿಗೆ ಮಾಹಿತಿ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು. ಧಾರಾವಾಹಿಯ ದೃಶ್ಯವನ್ನು ಬೆಂಗಳೂರಿನ ನಂದಿನಿ ಲೇಔಟ್​ನಲ್ಲಿ ಚಿತ್ರೀಕರಿಸಿದ್ದು, ಮುಂದಿನ ವಿಚಾರಣೆಗೆ ಅಲ್ಲಿನ ಪೊಲೀಸ್ ಠಾಣೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಲಾಗಿತ್ತು.

ದೂರು ಪರಿಶೀಲಿಸಿದ ರಾಜಾಜಿನಗರ ಠಾಣೆಯ ಪೊಲೀಸರು ಸಂಬಂಧಪಟ್ಟ ನಟಿ ಮತ್ತು ವಾಹನದ ಮಾಲಕಿಗೆ ಮೇ 10ರಂದು 500 ರೂ ದಂಡ ವಿಧಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ತಮ್ಮ ಧಾರಾವಾಹಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವುದಿಲ್ಲ ಎಂದು ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್​ ಅವರಿಂದ ಹಿಂಬರಹ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಜಯಪ್ರಕಾಶ್ ಎಕ್ಕೂರು, ಧಾರಾವಾಹಿಯ ಈ ದೃಶ್ಯದ ಬಗ್ಗೆ ಕಳೆದ ಆಗಸ್ಟ್​ನಲ್ಲಿ ಪೊಲೀಸರಿಗೆ ದೂರು ನೀಡಿದ್ದೆ. ಪ್ರಕರಣ ಬೆಂಗಳೂರು ಪೊಲೀಸ್ ಠಾಣೆಗೆ ರವಾನೆಯಾಗಿತ್ತು. ಸತತವಾಗಿ ವಿಚಾರಿಸಿದ ಕಾರಣ ಎರಡು ದಿನಗಳ ಹಿಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಹೆಲ್ಮೆಟ್ ಕಡ್ಡಾಯವನ್ನು ನಗರದಲ್ಲಿ ಪಾಲನೆ ಮಾಡುವಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮವಹಿಸಿದರೆ ಅಪಘಾತದ ವೇಳೆ ಸಂಭವಿಸುವ ಬಹುತೇಕ ಸಾವುಗಳನ್ನು ತಪ್ಪಿಸಬಹುದು. ಈ ಬಗ್ಗೆ ಸಾರ್ವಜನಿಕವಾಗಿ ಮಾತ್ರವಲ್ಲದೆ ಕಾಲೇಜುಗಳಲ್ಲೂ ಜಾಗೃತಿ ಕಾರ್ಯಕ್ರಮ ಅಗತ್ಯವಿದೆ ಎಂದರು.