ಮನೆ ರಾಷ್ಟ್ರೀಯ ದೇವರು ನನ್ನ ಕೈಹಿಡಿದು ನಡೆಸುತ್ತಿದ್ದಾನೆ: ಪ್ರಧಾನಿ ಮೋದಿ

ದೇವರು ನನ್ನ ಕೈಹಿಡಿದು ನಡೆಸುತ್ತಿದ್ದಾನೆ: ಪ್ರಧಾನಿ ಮೋದಿ

0

ನವದೆಹಲಿ: ಯಾವುದೋ ಮಹತ್ತರ ಕಾರ್ಯಕ್ಕಾಗಿ ಆ ದೇವರೇ ನನ್ನನ್ನು ಕಳುಹಿಸಿದ್ದಾನೆ. ದೇವರು ನನ್ನ ಕೈಹಿಡಿದು ನಡೆಸುತ್ತಿದ್ದಾನೆ ಎನಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Join Our Whatsapp Group

ಇಂಡಿಯಾ ಟಿವಿ ವಾಹಿನಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತವು ಮುಂದುವರಿದ ದೇಶವನ್ನಾಗಿ ಮಾಡಲು 2047ರವರೆಗೂ ತಾನು 24 ಗಂಟೆ ಕೆಲಸ ಮಾಡಬೇಕು. ಅದಕ್ಕಾಗಿ ಆ ದೇವರೇ ತನಗೆ ಚೈತನ್ಯ ನೀಡುತ್ತಿದ್ದಾನೆ. 2047ರೊಳಗೆ ವಿಕಸಿತ ದೇಶವನ್ನಾಗಿಸುವ ಗುರಿ ಈಡೇರುತ್ತದೆ ಎನ್ನುವ ವಿಶ್ವಾಸ ತನಗಿದೆ. ಈ ಗುರಿ ಸಾಧನೆಯಾಗುವವರೆಗೂ ಆ ದೇವರು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಭಾರತದ ಜಿಡಿಪಿ 2047ರೊಳಗೆ 35 ಟ್ರಿಲಿಯನ್ ಡಾಲರ್ ಮಟ್ಟ ಮುಟ್ಟಬೇಕೆಂದೂ ಗುರಿ ಇಟ್ಟಿದೆ. ಭಾರತ ವಿಕಸಿತ ಅಥವಾ ಮುಂದುವರಿದ ದೇಶವಾಗಬೇಕಾದರೆ ಅಷ್ಟು ಜಿಡಿಪಿ ಸಾಧನೆ ಅವಶ್ಯ. ಹಾಗೂ ತಲಾದಾಯ ಹೆಚ್ಚಳವೂ ಬಹಳ ಮುಖ್ಯ. ಭಾರತ ಈ ಗುರಿ ಸಾಧಿಸಬೇಕಾದರೆ ವರ್ಷಕ್ಕೆ ಶೇ. 9ರ ದರದಲ್ಲಿ ಬೆಳವಣಿಗೆ ಹೊಂದಬೇಕೆಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದ ಬಳಿ ಅಣು ಬಾಂಬ್ ಇರುವುದರಿಂದ ಅದಕ್ಕೆ ಗೌರವ ಕೊಡಬೇಕು ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ನೀಡಿದ ಹೇಳಿಕೆಗೆ ಪ್ರಧಾನಿಗಳು ವ್ಯಂಗ್ಯವಾಗಿ ತಿರುಗೇಟು ಕೊಟ್ಟಿದ್ದಾರೆ. ತಾನು ಖುದ್ದಾಗಿ ಲಾಹೋರ್​ಗೆ ಹೋಗಿ ಅದರ ತಾಕತ್ತು ಏನೆಂದು ತಿಳಿದುಕೊಂಡು ಬಂದಿದ್ದೇನೆ ಎಂದು ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಒಂದು ವರ್ಷದಲ್ಲಿ, ಅಂದರೆ 2015ರಲ್ಲಿ ದಿಢೀರನೇ ಲಾಹೋರ್​ಗೆ ಹೋಗಿ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ ಬಂದಿದ್ದರು.

ಪಾಕಿಸ್ತಾನದಲ್ಲಿ ಅಜ್ಞಾತ ವ್ಯಕ್ತಿಗಳು ಹತ್ಯೆಗಳನ್ನು ಮಾಡುತ್ತಿರುವುದರ ಹಿಂದೆ ಭಾರತದ ಕೈವಾಡ ಇದೆ ಎನ್ನುವ ಆರೋಪದ ಬಗ್ಗೆ ಮಾತನಾಡಿದ ಮೋದಿ, ಪಾಕಿಸ್ತಾನದಲ್ಲಿ ಯಾರಾದರು ಸತ್ತರೆ ಭಾರತದಲ್ಲಿ ಕೆಲವರು ಯಾಕೆ ಕಣ್ಣೀರು ಸುರಿಸಬೇಕು ಎಂದು ಕೇಳಿದ್ದಾರೆ.