ಮೈಸೂರು(Mysuru): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳ ಗುತ್ತಿಗೆಯನ್ನು ಸಚಿವರು ಹಾಗು ಮೇಲ್ಮಟ್ಟದ ಅಧಿಕಾರಿಗಳ ಆಪ್ತರು ಮತ್ತು ಸಂಬಂಧಿಕರಿಗೆ ನೀಡಲಾಗಿದೆ. ಪರಿಣಾಮ ಮುಡಾ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಮುಡಾ ಸದಸ್ಯ ಸಿ.ಎನ್ ಮಂಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಗುತ್ತಿಗೆಯನ್ನು ನಗರಾಭಿವೃದ್ಧಿ ಸಚಿವರ ಸಂಬಂಧಿಕರಿಗೆ ನೀಡಲಾಗಿದೆ. ಪರಿಣಾಮ ಮುಡಾ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಆಪಾದಿಸಿದರು.
ಮುಡಾ ಸಭೆ ನಡೆದು ಐದು ತಿಂಗಳಾಯಿತು. ಮುಡಾದ ಅಧಿಕಾರಿಗಳು ನಿವೇಶನಗಳನ್ನು ನಿರಂತರವಾಗಿ ಹರಾಜು ಹಾಕುವ ಮೂಲಕ ಮುಡಾವನ್ನು ದಿವಾಳಿ ಮಾಡಲು ಹೊರಟಿದ್ದಾರೆ ಎಂದು ಆಪಾದಿಸಿದರು.
ಹರಾಜಿನಿಂದ ಬರುವ ಕೋಟ್ಯಾಂತರ ಹಣವನ್ನು ಈಗಾಗಲೇ ಅಭಿವೃದ್ಧಿಪಡಿಸಿ ಮಹಾನಗರಪಾಲಿಕೆಗೆ ಹಸ್ತಾಂತರ ಮಾಡಿರುವ ಬಡಾವಣೆಗಳ ಅಭಿವೃದ್ಧಿಗೆ ನೀಡಲಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಮುಡಾದ ಆಸ್ತಿ ಕರಗುವುದರ ಜೊತೆಗೆ ಮುಡಾ ಆರ್ಥಿಕವಾಗಿಯೂ ದಿವಾಳಿಯತ್ತ ಸಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಗಂಭೀರ ಸ್ವರೂಪದ ಪಡೆಯಲು ಕಾರಣರಾದ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಂಸದ ಪ್ರತಾಪ್ ಸಿಂಹ ಒಬ್ಬ ಪುಂಗಿದಾಸ. ಇವರಿಂದ ಬಿಜೆಪಿ ಪಕ್ಷದ ವರಿಷ್ಠರಗೆ ಅವಮಾನವಾಗುತ್ತಿದೆ. ಬಾಯಿಗೆ ಬಂದಾ ಹಾಗೆ ಮಾತನಾಡುತ್ತಾನೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇಂಥ ವಿಚಾರಗಳನ್ನು ತೆಗೆದುಕೊಂಡು ಶಾಂತಿ ಕದಡುವ ಕೆಲಸ ಮಾಡುತ್ತಾರೆ ಎಂದು ಹರಿಹಾಯ್ದರು.