ಬೆಂಗಳೂರು : ಮನೆಯಲ್ಲಿ ಇರಿಸಿದರೆ ಸೇಫ್ ಅಲ್ಲ ಅಂತ ತಿಳಿದು ಬ್ಯಾಂಕ್ ಲಾಕರ್‌ನಲ್ಲಿರಿಸಿದ ಚಿನ್ನಾಭರಣಗಳು ಕಳ್ಳತನವಾದ ಘಟನೆ ನಗರದಲ್ಲಿ ನಡೆದಿದೆ. ಸಾರ್ವಜನಿಕ ವಲಯದ ಪ್ರತಿಷ್ಠಿತ ಬ್ಯಾಂಕ್‌ವೊಂದರ ಲಾಕರ್‌ನಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿವೆ ಎಂದು ಆರೋಪಿಸಿ ಲಾಕರ್ ಹೋಲ್ಡರ್ ರಾಜೇಂದ್ರ ಸಿ ಪಾಟೀಲ್ ಅವರು ಜಯನಗರ ಠಾಣೆಗೆ ದೂರು ದಾಖಲಿಸಿದ್ದಾರೆ.
ದೂರುದಾರ ರಾಜೇಂದ್ರ ಪಾಟೀಲ್, ಜಯನಗರ 8ನೇ ಬ್ಲಾಕ್‌ನಲ್ಲಿರುವ ಬ್ಯಾಂಕ್‌ವೊಂದರಲ್ಲಿ 4 ವರ್ಷಗಳಿಂದ ಲಾಕರ್ ಹೊಂದಿದ್ದರು. ಹೆಚ್ಚು ಬೆಲೆ ಬಾಳುವ ಚಿನ್ನಾಭರಣ ಹಾಗೂ ದಾಖಲಾತಿಗಳನ್ನು ಲಾಕರ್‌ನಲ್ಲಿರಿಸಿದ್ದರು. ಕಳೆದ ವರ್ಷ ಅಕ್ಟೋಬರ್‌ವರೆಗೂ ಲಾಕರ್ ಪರಿಶೀಲಿಸಿದಾಗ ಅದರಲ್ಲಿದ್ದ ಚಿನ್ನಾಭರಣ ಹಾಗೂ ದಾಖಲೆಗಳಿದ್ದವು. ಆದರೆ, ಫೆಬ್ರವರಿ 25ರಂದು ಲಾಕರ್ ತೆರೆದಾಗ ಚಿನ್ನಾಭರಣ ಕಳ್ಳತನವಾಗಿರುವುದು ಹಾಗೂ ಬೇರೆ ಆರ್ಟಿಫಿಶಿಯಲ್ ವಸ್ತುಗಳನ್ನು ಇರಿಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ಅವರನ್ನು ಪ್ರಶ್ನಿಸಿದರೆ ಸೂಕ್ತ ಉತ್ತರ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಲಾಕರ್‌ನ ಒಂದು ಕೀ ತಮ್ಮ ಬಳಿ, ಮತ್ತೊಂದು ಮಾಸ್ಟರ್ ಕೀ ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ಬಳಿ ಇರುತ್ತಿತ್ತು. ತಾವು ಲಾಕರ್ ತೆರೆಯದ ಹೊರತಾಗಿಯೂ ಸಹ ಚಿನ್ನಾಭರಣ ಕಳ್ಳತನವಾಗಿದೆ ಎಂದು ರಾಜೇಂದ್ರ ಪಾಟೀಲ್ ದೂರು ನೀಡಿದ್ದಾರೆ. ಈ ದೂರಿನನ್ವಯ ಜಯನಗರ ಠಾಣೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ. ಅವರು ಯಾವಾಗ ಕೆಲಸಕ್ಕೆ ಸೇರಿದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ತಿಳಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವ ಮಾಹಿತಿ : ”ನಾನು 2021 ಜೂನ್ 5ರಂದು ಇಲ್ಲಿನ ಬ್ಯಾಂಕ್‌ವೊಂದರಲ್ಲಿ ನನ್ನ ಕೆಲವು ದಾಖಲಾತಿ ಮತ್ತು ಒಡವೆಗಳನ್ನು ಸುರಕ್ಷಿತವಾಗಿಡಲು ವೈಯಕ್ತಿಕ ಲಾಕರ್ ಅನ್ನು ತೆಗೆದುಕೊಂಡಿದ್ದೆ. 2024ರ ಜೂನ್ 6, ಜುಲೈ 7 ಮತ್ತು ಅಕ್ಟೋಬರ್ 7ರಂದು ಸದರಿ ಲಾಕರ್ ಅನ್ನು ತೆರೆದು ನೋಡಿದ್ದೆ. ನನ್ನ ಬಳಿ ಇದ್ದ ಹಾಗೂ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ರಾಜು ಅವರ ಬಳಿ ಇದ್ದ ಮಾಸ್ಟರ್ ಕೀ ಬಳಸಿ ಲಾಕರ್ ಅನ್ನು ತೆರೆದು ನೋಡಲಾಗಿತ್ತು. ಆಗ ಲಾಕರ್ನಲ್ಲಿಟ್ಟಿದ್ದ ಎರಡು ಚಿನ್ನದ ಬಾಜುಬಂದ್ ಒಡವೆಗಳಿದ್ದವು. ಸರಿಯಾಗಿ ಇದ್ದುದರಿಂದ ಮತ್ತೆ ಲಾಕ್ ಮಾಡಿಕೊಂಡು ಬರಲಾಗಿತ್ತು. ಇದಾದ ಬಳಿಕ 2025 ಫೆ.20 ರಂದು ಮತ್ತೆ ಲಾಕರ್ ತೆರೆಯಲಾಗಿತ್ತು. ಆಗ ಎರಡು ಚಿನ್ನದ ಬಾಜುಬಂದ್ ಒಡವೆಗಳು ಕಾಣೆಯಾಗಿದ್ದು ಕಂಡುಬಂದಿತು. ಅಲ್ಲದೇ ಲಾಕರ್ನಲ್ಲಿ ನನ್ನದಲ್ಲದ ಬೇರೆ ಯಾವುದೋ ಒಂದು ಆರ್ಟಿಫಿಶಿಯಲ್ ಬಳೆ ಕಂಡುಬಂತು. ಕೂಡಲೇ ನಾನು ಅಸಿಸ್ಟೆಂಟ್ ಮ್ಯಾನೇಜರ್ ರಾಜು ಅವರನ್ನು ಕೇಳಿದೆ. ಆಗ ಅವರು ತಮಗೆ ಗೊತ್ತಿಲ್ಲವೆಂದು ಹಾಗೂ ಆರ್ಬಿಐ ಬ್ಯಾಂಕ್ನಿಂದ ಗೈಡ್ಲೈನ್ಸ್ ಇದ್ದು, ನಮಗೆ ಇದರ ಬಗ್ಗೆ ಸಂಬಂಧವಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಬ್ಯಾಂಕಿನ ಲಾಕರ್ನಲ್ಲಿದ್ದ ಚಿನ್ನದ ಒಡವೆ ಕಳ್ಳತನವಾಗಿವುದರಿಂದ ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ರಾಜು ಮತ್ತು ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು” ಒತ್ತಾಯಿಸಿ ಲಾಕರ್ ಹೋಲ್ಡರ್ ರಾಜೇಂದ್ರ ದೂರು ನೀಡಿದ್ದಾರೆ.