ಸುಳ್ಯ: ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸುಳ್ಯ ಕಡೆ ಹೋಗುವ ಬಸ್ಸಿಗೆ ಹತ್ತುತ್ತಿದ್ದ ವೃದ್ಧ ಮಹಿಳೆಯ ಚಿನ್ನವನ್ನು ಹಿಂದಿನಿಂದ ಎಗರಿಸಿ ಅದೇ ಬಸ್ನಲ್ಲಿ ಸುಳ್ಯ ಕಡೆ ತೆರಳಿದ ಕಳ್ಳಿಯರನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದ ಘಟನೆ ಗುರುವಾರ ನಡೆದಿದೆ.
ಮಹಿಳೆಯೋರ್ವರು ಬಂಗಾರದ ಟಿಕ್ಕಿ ಖರೀದಿಸಿ ತನ್ನ ಬ್ಯಾಗ್ನಲ್ಲಿ ಇಟ್ಟುಕೊಂಡು ಮನೆಗೆ ಹೋಗಲು ಪುತ್ತೂರಿನಲ್ಲಿ ಬಸ್ ಹತ್ತಿದ್ದಾರೆ. ಜನ ದಟ್ಟಣೆ ನಡುವೆ ಮಹಿಳೆ ಬಸ್ ಹತ್ತಿದ್ದು, ಬಸ್ ಹತ್ತಿ ಸೀಟ್ನಲ್ಲಿ ಕುಳಿತು ಬ್ಯಾಗ್ ಪರಿಶೀಲನೆ ವೇಳೆ ಚಿನ್ನ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.
ಚಿನ್ನ ಕಳೆದುಕೊಂಡ ಮಹಿಳೆ ತತ್ಕ್ಷಣ ಪುತ್ತೂರು ಠಾಣೆಗೆ ಮಾಹಿತಿ ನೀಡಿದ್ದು ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಸಿಸಿ ಟಿವಿ ಪರಿಶೀಲನೆ ವೇಳೆ ಆರೋಪಿಗಳು ಸುಳ್ಯ ಕಡೆಗೆ ತೆರಳುವ ಬಸ್ ಹತ್ತಿರುವುದನ್ನು ಕಂಡುಬಂದಿದೆ.
ಕೂಡಲೇ ಪುತ್ತೂರು ಪೊಲೀಸರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದರು. ಸುಳ್ಯ ಠಾಣಾ ಎಸ್ಐ ಸರಸ್ವತಿ ನೇತೃತ್ವದಲ್ಲಿ ಪೊಲೀಸ್ ಸಿಬಂದಿ ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿದ ಕಳ್ಳಿಯರನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕಳ್ಳತನವಾದ ಚಿನ್ನ ಇರುವುದು ಖಚಿತಗೊಂಡಿದೆ. ಆ ಬಳಿಕ ಆರೋಪಿಗಳನ್ನು ಪುತ್ತೂರು ಪೊಲೀಸರಿಗೆ ಹಸ್ತಾಂತರಿಸಲಾಯಿತು.