ಮನೆ ಸುದ್ದಿ ಜಾಲ ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಹಬ್ಬದಂದು ಸರ್ಕಾರದಿಂದ ಸಿಹಿ ಸುದ್ದಿ

ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಹಬ್ಬದಂದು ಸರ್ಕಾರದಿಂದ ಸಿಹಿ ಸುದ್ದಿ

0

ಬೆಂಗಳೂರು: ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕಿಳಿದಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರಕಾರ ಸಂಕ್ರಾಂತಿ ದಿನದಂದು ಸಿಹಿಸುದ್ದಿ ನೀಡಿದೆ.

ಸರಕಾರದ ಪರವಾಗಿ ವಿಧಾನಸೌಧದಲ್ಲಿ ಶುಕ್ರವಾರ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು,  ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಏರಿಸಿದೆ. ಜೊತೆಗೆ, ಸೆಮಿಸ್ಟರ್-ವಾರು ನೇಮಕಾತಿಯನ್ನು ನಿಲ್ಲಿಸಿ, ಇನ್ನು ಮುಂದೆ ಇಡೀ ಶೈಕ್ಷಣಿಕ ವರ್ಷಕ್ಕೆ ನೇಮಿಸಿ ಕೊಳ್ಳುವುದಾಗಿ ಘೋಷಿಸಿದೆ. ಯುಜಿಸಿ ನಿಗದಿತ ಶೈಕ್ಷಣಿಕ ಅರ್ಹತೆ ಇದ್ದು 5 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರು ಇನ್ನು ಮುಂದೆ ಮಾಸಿಕ 32 ಸಾವಿರ ರೂ, ಇದಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವವರು ಮಾಸಿಕ 30 ಸಾವಿರ ರೂ ಗೌರವಧನ ಪಡೆಯಲಿದ್ದಾರೆ ಎಂದು ಪ್ರಕಟಿಸಿದರು.

ಹಾಗೆಯೇ, ಯುಜಿಸಿ ಬಯಸುವ ಶೈಕ್ಷಣಿಕ ಅರ್ಹತೆ ಹೊಂದದೆ 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವವರಿಗೆ ಮಾಸಿಕ 28 ಸಾವಿರ ರೂ. ಮತ್ತು ಇದಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿರುವವರಿಗೆ ಮಾಸಿಕ 26 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿದೆ. ಜತೆಗೆ, ಇವರು ನಿಗದಿತ ಶೈಕ್ಷಣಿಕ ಅರ್ಹತೆ ಗಳಿಸಿಕೊಳ್ಳಲು 3 ವರ್ಷಗಳ ಕಾಲಾವಕಾಶ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆಲ್ಲ ಇನ್ನು ಮುಂದೆ ಪ್ರತೀ ತಿಂಗಳು 10ರೊಳಗೆ ವೇತನ ಪಾವತಿಸಲಾಗುವುದು ಎಂದು ಅವರು ವಿವರಿಸಿದರು.

ಇದುವರೆಗೆ, ಯುಜಿಸಿ ನಿಗದಿತ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರು ತಿಂಗಳಿಗೆ 13 ಸಾವಿರ ರೂ. ಮತ್ತು ಮಿಕ್ಕವರು 11 ಸಾವಿರ ರೂ. ಗೌರವಧನ ಪಡೆಯುತ್ತಿದ್ದರು.

ಇದಲ್ಲದೆ, ಅತಿಥಿ ಉಪನ್ಯಾಸಕರ ಸುಗಮ ನೇಮಕಾತಿಗೆ ಆನ್-ಲೈನ್ ಪೋರ್ಟಲ್ಲನ್ನು ಸಹ ಅಭಿವೃದ್ಧಿ ಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಇದರಲ್ಲಿ ಜ.17ರಿಂದ ಅರ್ಜಿ ಹಾಕಿಕೊಳ್ಳಬಹುದು. ಇದಕ್ಕೆ ಒಂದು ವಾರ ಕಾಲಾವಕಾಶವಿದ್ದು, ಅಭ್ಯರ್ಥಿಗಳು ತಮ್ಮ ಇಷ್ಟದ 5 ಸರಕಾರಿ ಕಾಲೇಜುಗಳನ್ನು ಸೂಚಿಸಲು ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಅತಿಥಿ ಉಪನ್ಯಾಸಕರಿಗೆ ಸೂಕ್ತ ಕಾರ್ಯಭಾರ ಇರುವಂತೆ ವ್ಯವಸ್ಥೆ ಮಾಡಲಾಗುವುದು  ಎಂದು ಅವರು ತಿಳಿಸಿದರು.

ಹಿಂದಿನ ಲೇಖನಭಾರತ-ಚೀನಾದೊಂದಿಗಿನ ಗಡಿ ಸಂಬಂಧ: ಲಡಾಖ್ ಬಿಕ್ಕಟ್ಟಿನ ಕುರಿತು 14ನೇ ಸುತ್ತಿನ ಮಿಲಿಟರಿ ಮಾತುಕತೆ
ಮುಂದಿನ ಲೇಖನಭಾರತದಿಂದ ಕಾಣೆಯಾಗಿದ್ದ ವಿಗ್ರಹ ಇಂಗ್ಲೆಂಡ್ ನಲ್ಲಿ ಪತ್ತೆ: ಭಾರತಕ್ಕೆ ಹಸ್ತಾಂತರ