ಮನೆ ಕಾನೂನು ಹೆಚ್ ಎಸ್‌ ಆರ್‌ ಪಿ ಅಳವಡಿಸದವರಿಗೆ ಸಿಹಿ ಸುದ್ದಿ: ಗಡುವು ವಿಸ್ತರಣೆಗೆ ಒಪ್ಪಿಗೆ

ಹೆಚ್ ಎಸ್‌ ಆರ್‌ ಪಿ ಅಳವಡಿಸದವರಿಗೆ ಸಿಹಿ ಸುದ್ದಿ: ಗಡುವು ವಿಸ್ತರಣೆಗೆ ಒಪ್ಪಿಗೆ

0

ಬೆಂಗಳೂರು: ರಾಜ್ಯದಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ನೀಡಿರುವ ಡೆಡ್ ಲೈನ್ ಜೂನ್ 12ಕ್ಕೆ ಕೊನೆಗೊಂಡಿದೆ. ಆದರೆ,  ಹೆಚ್ ಎಸ್‌ ಆರ್‌ ಪಿ ಅಳವಡಿಸದವರ ವಿರುದ್ಧ ಜುಲೈ 4ರ ವರೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ಹೆಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು ವಿಸ್ತರಿಸಲು ಒಪ್ಪಿಗೆ ನೀಡಿದೆ.

Join Our Whatsapp Group

ಗಡುವು ವಿಸ್ತರಣೆಗೆ ವಿನಂತಿಸಿ ಬಿಎನ್‌ಡಿ ಎನರ್ಜಿ ಲಿಮಿಟೆಡ್ ಮತ್ತು ಇತರರು ಸಲ್ಲಿಸಿದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಅವಧಿ ವಿಸ್ತರಣೆಗೆ ಅನುಮತಿ ನೀಡಿದ್ದಾರೆ.

ಹೆಚ್ ಎಸ್‌ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಕೆಯ ಅನುಷ್ಠಾನಕ್ಕೆ ಮೇ 31 ರ ಗಡುವು ನಿಗದಿಪಡಿಸಲಾಗಿತ್ತು ಎಂದು ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿಕ್ರಂ ಹುಯಿಲಗೋಳ ವಿವರಿಸಿದರು. ಆದರೆ, ಜೂನ್ 12ರವರೆಗೆ ಹೆಚ್‌ಎಸ್‌ಆರ್‌ಪಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮಗಳು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್‌ನ ರಜಾಕಾಲದ ಪೀಠವು ಈ ಹಿಂದೆ ಮೇ 21 ರಂದು ಆದೇಶಿಸಿತ್ತು. ಇದು ಗಡುವು ವಿಸ್ತರಿಸಿ ಅಧಿಸೂಚನೆ ಹೊರಡಿಸದಂತೆ ಸರ್ಕಾರವನ್ನು ತಡೆದಿತ್ತು.

ಗಡುವು ಆಗಸ್ಟ್, ಸೆಪ್ಟೆಂಬರ್ ವರೆಗೆ ವಿಸ್ತರಣೆ ಸಾಧ್ಯತೆ

ಈ ಮಧ್ಯೆ, ಹೆಚ್‌ಎಸ್‌ಆರ್‌ಪಿ ಅಳವಡಿಕೆ ಅವಧಿಯನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ ವರೆಗೆ ವಿಸ್ತರಿಸಲು ಸರ್ಕಾರ ಯೋಜಿಸಿದೆ ಎಂದು ಹುಯಿಲಗೋಳ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮೇ 21ರ ಆದೇಶವನ್ನು ಮಾರ್ಪಾಡು ಮಾಡಿ ಸರ್ಕಾರಕ್ಕೆ ವಿಸ್ತರಣೆ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದ್ದಾರೆ. ಅನುಮತಿ ನೀಡಿದರೆ ಒಂದು ವಾರದೊಳಗೆ ಗಡುವು ವಿಸ್ತರಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದ್ದಾರೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಡಿ, ಅವಧಿ ವಿಸ್ತರಣೆ ಅಧಿಸೂಚನೆಯನ್ನು ಮಂಡಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕು ಎಂದು ಸಮ್ಮತಿಸಿದ್ದಾರೆ. ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಈ ಮನವಿಗೆ ನ್ಯಾಯಾಲಯ ಸಮ್ಮತಿಸಿದೆ.

ಇದೀಗ ಹೈಕೋರ್ಟ್​ ಮಧ್ಯಂತರ ಆದೇಶ ಜುಲೈ 4 ರವರೆಗೆ ವಿಸ್ತರಣೆಯಾಗಿದ್ದು, ಅಲ್ಲಿಯ ವರೆಗೆ ಹೆಚ್‌ಎಸ್‌ಆರ್‌ಪಿ ಅಳವಡಿಸದವರ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ. ಜತೆಗೆ, ರಾಜ್ಯ ಸರ್ಕಾರವು ಹೆಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು ಆಗಸ್ಟ್ ಅಥವಾ ಸೆಪ್ಟೆಂಬರ್‌ವರೆಗೆ ವಿಸ್ತರಿಸಲು ಕೋರ್ಟ್ ಅನುವು ಮಾಡಿಕೊಟ್ಟಿದೆ. ಹೀಗಾಗಿ ಇದೀಗ ಸರ್ಕಾರ ಅವಧಿ ವಿಸ್ತರಣೆ ಮಾಡಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.