ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಗಪುರ ಕಚೇರಿಯ ಡಾ. ಹೆಡಗೇವಾರ್ ವಸ್ತು ಸಂಗ್ರಹಾಲಯದ ಪ್ರವೇಶ ನಿರಾಕರಿಸಲಾಗಿತ್ತು ಎಂಬ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಆರ್ ಎಸ್ ಎಸ್ ಕರ್ನಾಟಕ ಘಟಕ ಸ್ಪಷ್ಟನೆ ನೀಡಿದೆ.
ನಾಗಪುರದ ಸಂಘದ ಕಾರ್ಯಾಲಯ ನೋಡಲು ಬಂದವರ ಹೆಸರು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ ಎಂದು ಆರ್ಎಸ್ಎಸ್ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಹೊಸದುರ್ಗದ ಮಾಜಿ ಶಾಸಕರಾದ ಗೂಳಿಹಟ್ಟಿ ಶೇಖರ್ ಅವರ ಆಡಿಯೋ ಹೇಳಿಕೆಯಲ್ಲಿ ‘ತಮಗೆ ಜಾತಿ ಕಾರಣಕ್ಕೆ ನಾಗಪುರದ ಡಾ. ಹೆಡಗೇವಾರ್ ಸ್ಮಾರಕ ಕಟ್ಟಡದಲ್ಲಿ ಪ್ರವೇಶ ನಿರಾಕರಿಸಲಾಯಿತು’ ಎಂದು ಆರೋಪಿಸಿದ್ದಾರೆ.
ನಾಗಪುರದಲ್ಲಿ ಸಂಘ ಕಾರ್ಯಾಲಯವನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಇದೊಂದು ನಿರಾಧಾರದ ಹಾಗೂ ಹುರುಳಿಲ್ಲದ ಆರೋಪವಾಗಿದೆ. ಆರ್ ಎಸ್ ಎಸ್ ನ ಯಾವುದೇ ಕಚೇರಿಯಲ್ಲಾಗಲಿ, ಅಥವಾ ಈ ರೀತಿಯ ಸ್ಮಾರಕ ಕಟ್ಟಡಗಳಲ್ಲಾಗಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಎಲ್ಲಾ ಜಾತಿ, ವರ್ಗದ ಸಾವಿರಾರು ಜನ ನಿತ್ಯ ಬಂದು ಹೋಗುತ್ತಲೇ ಇದ್ದಾರೆ. ಯಾರಿಗೂ ಪ್ರವೇಶ ನಿರಾಕರಣೆಯ ಪ್ರಶ್ನೆಯೇ ಬಂದಿಲ್ಲ’ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಆರ್ಎಸ್ಎಸ್ ತಿಳಿಸಿದೆ.
ಇಷ್ಟಾಗಿ ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಮೊದಲು ಈ ಘಟನೆ ನಡೆದಿತ್ತು ಎನ್ನುವ ಗೂಳಿಹಟ್ಟಿ ಶೇಖರ್ ಅವರು ಆನಂತರ ಅನೇಕ ಸಂಘದ ಪ್ರಮುಖರನ್ನು ಭೇಟಿಯಾದರೂ ಎಲ್ಲಿಯೂ ತಮಗಾದ ಈ ‘ಅವಮಾನ’ದ ಬಗ್ಗೆ ಹೇಳಿರಲಿಲ್ಲ. ಈಗ ಹತ್ತು ತಿಂಗಳ ನಂತರ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲರನ್ನೂ ಸದಾ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ’ ಎಂದು ಆರ್ಎಸ್ಎಸ್ ತಿಳಿಸಿದೆ.
ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂಬುದು ಗೊತ್ತಾದ ಕಾರಣ ಹೆಡಗೇವಾರ್ ವಸ್ತು ಸಂಗ್ರಹಾಲಯಕ್ಕೆ ತಮಗೆ ಪ್ರವೇಶ ನಿರಾಕರಿಸಲಾಗಿತ್ತು. ವಸ್ತು ಸಂಗ್ರಹಾಲಯದೊಳಕ್ಕೆ ತೆರಳುವವರ ಹೆಸರು ಮತ್ತು ವಿವರ ನೋಂದಾಯಿಸಬೇಕಿತ್ತು. ಅದಾದ ಬಳಿಕ ತಮ್ಮನ್ನು ವ್ಯಕ್ತಿಯೊಬ್ಬರು ಒಳ ಪ್ರವೇಶಿಸದಂತೆ ತಡೆದಿದ್ದರು ಎಂದು ಗೂಳಿಹಟ್ಟಿ ಆರೋಪಿಸಿದ್ದರು.














