ಬೆಂಗಳೂರು: ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅಧಿಕೃತ ಒಪ್ಪಿಗೆ ಕೊಡಲ್ಲ. ಆದರೆ ಅವರು ಯಾರಿಗೂ ತೊಂದರೆ ಮಾಡದೇ ಪಾದಯಾತ್ರೆ ಮಾಡುವುದಾದರೆ ಮಾಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮುಡಾದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ಪಾದಯಾತ್ರೆ ನಡೆಸಲು ನಿರ್ಧರಿಸಿವೆ.
ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ನಮ್ಮ ಪಾದಯಾತ್ರೆಗೂ ಅವರು ಅನುಮತಿ ಕೊಟ್ಟಿರಲಿಲ್ಲ. ಆದರೂ ನಾವೂ ಮಾಡಿದೆವು, ಹಾಗೇ ಅವರೂ ಮಾಡಲಿ. ಆದರೆ ಸರ್ಕಾರದ ಅನುಮತಿ ಇರಲ್ಲ. ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಸರ್ಕಾರ ಅನುಮತಿ ಕೊಡಲ್ಲ. ಅವರು ಪಾದಯಾತ್ರೆ ಮಾಡಿದರೆ ಮಾಡಲಿ. ಆದರೆ ಅಧಿಕೃತವಾಗಿ ಅದಕ್ಕೆ ನಮ್ಮ ಪೊಲೀಸ್ ಇಲಾಖೆ ಅನುಮತಿ ಕೊಡಲ್ಲ. ಪಾದಯಾತ್ರೆಗೆ ತಡೆ ಹಾಕಲ್ಲ. ಅನುಮತಿ ಕೊಟ್ಟರೆ ಕಾನೂನು ಸಮಸ್ಯೆಗಳಾಗಲಿವೆ. ಆದರೆ ಅವರು ಜನರಿಗೆ ತೊಂದರೆ ಕೊಡದೇ ಪಾದಯಾತ್ರೆ ನಡೆಸಲಿ. ಪಾದಯಾತ್ರೆಗೆ ಏನು ವ್ಯವಸ್ಥೆ ಬೇಕೋ ಮಾಡಿಕೊಡ್ತೇವೆ ಎಂದರು.
ರಾಜ್ಯಕ್ಕೆ ಅನುದಾನ ಅನ್ಯಾಯವಾಗಿಲ್ಲ ಎಂಬ ಸಚಿವೆ ನಿರ್ಮಲಾ ಸೀತರಾಮನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಯುಪಿಎ ಎನ್‌ಡಿಎ ಅವಧಿ ಅನ್ನೋ ಹೋಲಿಕೆಯ ಪ್ರಶ್ನೆ ಅಲ್ಲ. ಅಂದಿನ ಬಜೆಟ್ ಎಷ್ಟಿತ್ತು, ಈಗ ಎಷ್ಟಾಗಿದೆ ಅನ್ನೋದನ್ನು ನೋಡಬೇಕು. ಚಂದ್ರಬಾಬು ನಾಯ್ಡುಗೆ 15 ಸಾವಿರ ಕೋಟಿ ಕೊಟ್ಟಿದ್ದಾರೆ. ಕೊಡೋದು ಬೇಡ ಅನ್ನಲ್ಲ, ಸರಿ ಸಮಾನವಾಗಿ ಕೊಡಬೇಕು. ನಮ್ಮ ಪಾಲನ್ನು ನಮಗೆ ಕೊಡಿ ಅಂತ ಸುಪ್ರೀಂ ಕೋರ್ಟ್ವರೆಗೆ ತಲುಪಿದ್ದೇವೆ. ಕೊಟ್ಟಿದೀವಿ ಕೊಟ್ಟಿದೀವಿ ಅಂತಾರೆ, ಏನು ಕೊಟ್ಟಿದ್ದಾರೆ ಅಂತ ಹೇಳಬೇಕಲ್ವಾ?. ಭದ್ರಾಗೆ ಹಣಕೊಡಬೇಕಿತ್ತು, ಕೊಟ್ಟಿಲ್ಲ. ಈ ರೀತಿ ಮಲತಾಯಿ ಧೋರಣೆ ತೋರಿಸಿ, ಬೆಂಗಳೂರಿಗೆ ಬಂದು ಎಲ್ಲಾ ಕೊಟ್ಟಿದ್ದಿವಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಬೆಂಗಳೂರು ದೇಶದ ಪ್ರತಿಷ್ಠಿತ ನಗರ. ಬೆಂಗಳೂರನ್ನು ಕರ್ನಾಟಕಕ್ಕೆ ಸೀಮಿತ ಮಾಡಬಾರದು. ಇದನ್ನು ಪ್ರಪಂಚಕ್ಕೆ ತೋರಿಸಬೇಕಲ್ವಾ?. ನೀತಿ ಆಯೋಗಕ್ಕೆ ಮಮತಾ ಹೋಗಿ ವಾಕ್ ಔಟ್ ಮಾಡಿ ಬಂದಿದ್ದಾರೆ. ನಾವು ಹೋಗಿ ವಾಕ್ ಔಟ್ ಮಾಡಬೇಕಿತ್ತಾ?. ರಾಜ್ಯ, ಕೇಂದ್ರದ ನಡುವಿನ ಸಂಬಂಧ ಚೆನ್ನಾಗಿರಬೇಕು. ಅದಕ್ಕೆ ರಾಜ್ಯವನ್ನು ಚೆನ್ನಾಗಿ ನಡೆಸಿಕೊಳ್ಳಬೇಕಲ್ವಾ ಎಂದರು.
ಕಂಪನಿಗಳು ರಾಜ್ಯವನ್ನು ತೊರೆಯುತ್ತಿದೆ ಎಂಬ ಸಚಿವೆ ನಿರ್ಮಲಾ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಕಂಪನಿಗಳು ಹಲವು ಆಪ್ಶನ್ ಇಟ್ಟುಕೊಂಡು ಬರ್ತಾರೆ. ಇಲ್ಲಿಗೆ ಬಂದು ಹೋಗ್ತಾರೆ ಅಂತ ಅಲ್ಲ ಎಂದು ಹೇಳಿದರು.
ಪ್ರತಿಪಕ್ಷಗಳ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಕೂಡ ರಣತಂತ್ರವನ್ನು ಹೆಣೆದು ಕೌಂಟರ್ ಕೊಡುತ್ತದೆ. ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ಆದ್ದರಿಂದ ನಾವೂ ಕೂಡ ರಾಜಕೀಯ ಮಾಡಬೇಕಾಗುತ್ತದೆ. ಇದಕ್ಕೆ ಸರ್ಕಾರವನ್ನು ಬಳಸಿಕೊಲ್ಲ, ಪಕ್ಷದ ವತಿಯಿಂದ ಮಾಡುತ್ತೇವೆ ಎಂದು ಉತ್ತರಿಸಿದರು.
ಬಿಬಿಎಂಪಿ ಕಸದ ಲಾರಿಗೂ ಇಬ್ಬರು ಬಲಿ ಪ್ರಕರಣ ವಿಚಾರವಾಗಿ ಮಾತನಾಡಿ, ನಿನ್ನೆ ರಾತ್ರಿ ಅಪಘಾತ ಆಗಿದೆ. ಇಬ್ಬರು ಮೃತಪಟ್ಟಿದ್ದಾರೆ. ಬಿಬಿಎಂಪಿ ಮೃತರ ಕುಟುಂಬಗಳಿಗೆ ನೆರವು ಕೊಡಲಿದೆ. ಇದು ದುರಾದೃಷ್ಟಕರ ಘಟನೆ ಎಂದು ಪ್ರತಿಕ್ರಿಯಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಆಗಸ್ಟ್ 3 ರಿಂದ ಬೆಂಗಳೂರಿನಿಂದ ಪಾದಯಾತ್ರೆ ಆರಂಭವಾಗಲಿದ್ದು, ಆ.10 ರಂದು ಮೈಸೂರಲ್ಲಿ ಸಮಾರೋಪವಾಗಲಿದೆ.