ಹಾಸನ (Hassan): ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಬೇಲೂರು ಮತ್ತು ಹಳೇ ಬೀಡಿನಲ್ಲಿರುವ ಪ್ರಸಿದ್ಧ ಚನ್ನಕೇಶವ ದೇವಸ್ಥಾನ, ಹೊಯ್ಸಳೇಶ್ವರ ದೇವಾಲಯಗಳಿಗೆ ಭೇಟಿ ನೀಡಿದರು.
ಮೊಟ್ಟ ಮೊದಲ ಬಾರಿಗೆ ಹಾಸನ ಜಿಲ್ಲೆಗೆ ಭೇಟಿ ನೀಡಿದ ರಾಜ್ಯಪಾಲರು ಬೇಲೂರು ಮತ್ತು ಹಳೇ ಬೀಡಿನ ಚನ್ನಕೇಶವ ದೇವಸ್ಥಾನ ಮತ್ತು ಹೊಯ್ಸಳೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವಾಲಯದ ಸುತ್ತಮುತ್ತ ಕೆತ್ತಲಾದ ಅದ್ಭುತ ವಾಸ್ತು ಶಿಲ್ಪಗಳನ್ನು ವೀಕ್ಷಿಸಿದರು.
ಐತಿಹಾಸಿಕ ಬೇಲೂರು ಮತ್ತು ಹಳೇ ಬೀಡು ವಾಸ್ತು ಶಿಲ್ಪ ಶೈಲಿ ಕುರಿತು ಹಿರಿಯ ಮಾರ್ಗದರ್ಶಕ ಅಸ್ಸಾಂ ಶರೀಫ್ ಅವರು ರಾಜ್ಯಪಾಲರಿಗೆ ತಿಳಿಸಿದರು. ದೇವಾಲಯದ ಇತಿಹಾಸ, ಆಡಳಿತಗಾರರು ಮತ್ತು ನಿರ್ಮಾಣದ ಉದ್ದೇಶವನ್ನು ವಿವರಿಸಿದ್ದಾರೆ.
ದೇವಾಲಯದ ಸುತ್ತಲೂ ಸ್ಥಾಪಿಸಲಾದ ಕೆತ್ತನೆಗಳು ಮತ್ತು ಶಿಲಾಬಾಲಿಕೆಯರ ವಾಸ್ತು ಶಿಲ್ಪ ಕಂಡು ರಾಜ್ಯಪಾಲರು ವಿಸ್ಮಿತರಾದರು. ಬಳಿಕ ಚನ್ನಕೇಶವ ದೇವರಿಗೆ ಪೂಜೆ ಸಲ್ಲಿಸಿದರು. ರಾಜ್ಯಪಾಲರು ಹಾಗೂ ಕುಟುಂಬದವರ ಹೆಸರಿನಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಅರ್ಚನೆ ಮಾಡಿದರು.
ಇದಕ್ಕೂ ಮುನ್ನ ಸ್ಥಳೀಯ ಶಾಸಕ ಕೆ.ಎಸ್.ಲಿಂಗೇಶ್ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿದುಲ್ಲತಾ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು.